ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೈತ್‌ ಅಗ್ನಿ ದುರಂತದಲ್ಲಿ 40 ಭಾರತೀಯರ ಸಾವು; ಮೃತದೇಹ ತರಲು ಯತ್ನ: ಜೈಶಂಕರ್‌

Published 13 ಜೂನ್ 2024, 2:20 IST
Last Updated 13 ಜೂನ್ 2024, 2:20 IST
ಅಕ್ಷರ ಗಾತ್ರ

ನವದೆಹಲಿ: ಕುವೈತ್‌ನ ಕಟ್ಟಡವೊಂದರಲ್ಲಿ ಬುಧವಾರ ನಡೆದ ಅಗ್ನಿ ದುರಂತದಲ್ಲಿ 40 ಭಾರತೀಯರು ಮೃತಪಟ್ಟಿದ್ದು, 50 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕುವೈತ್‌ನ ಮಂಗಾಫ್ ಪ್ರದೇಶದ ಕಟ್ಟಡದಲ್ಲಿ 195 ಮಂದಿ ವಲಸೆ ಕಾರ್ಮಿಕರು ವಾಸವಿದ್ದರು. ಅವರಲ್ಲಿ ಒಟ್ಟು 49 ಮಂದಿ ಮೃತಪಟ್ಟಿದ್ದು ಅವರಲ್ಲಿ 40 ಜನ ಭಾರತೀಯರು ಎಂದು ತಿಳಿದುಬಂದಿದೆ. ಮೃತಪಟ್ಟ ಇತರರು ಪಾಕಿಸ್ತಾನ, ಫಿಲಿಪಿನೋ, ಈಜಿಪ್ಟ್‌ ಮತ್ತು ನೇಪಾಳ ಮೂಲದ ಕಾರ್ಮಿಕರು ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ಅಧಿಕೃತ ಮಾಹಿತಿ ತಿಳಿಸಿದೆ. 

ಘಟನೆಯ ಕುರಿತು ಪ್ರಧಾನಿ ಮೋದಿ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ. ಸಭೆಯ ನಂತರ, ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಮೃತ ಭಾರತೀಯ ಪ್ರಜೆಗಳ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರವನ್ನು ಘೋಷಿಸಿದ್ದು, ಭಾರತ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಬೇಕೆಂದು ಪ್ರಧಾನಿ ಮೋದಿ ನಿರ್ದೇಶನ ನೀಡಿದ್ದಾರೆ.

ಕುವೈತ್‌ ವಿದೇಶಾಂಗ ಸಚಿವರೊಂದಿಗೆ ಚರ್ಚೆ

‘ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದ ಕುರಿತು ವಿದೇಶಾಂಗ ಸಚಿವ ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು, ದುರಂತಕ್ಕೆ ಕಾರಣ ಯಾರು ಎನ್ನುವುದನ್ನು ಪತ್ತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ’ ಎಂದು ಜೈಶಂಕರ್ ಎಕ್ಸ್ ನಲ್ಲಿ ಹೇಳಿದ್ದಾರೆ.

ದುರಂತದಲ್ಲಿ ಜೀವ ಕಳೆದುಕೊಂಡವರ ಪಾರ್ಥಿವ ಶರೀರವನ್ನು ಶೀಘ್ರವಾಗಿ ಸ್ವದೇಶಕ್ಕೆ ಕಳುಹಿಸುವಂತೆ ಕೋರಲಾಗಿದೆ. ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಭಾರತೀಯರಿಗೆ ನೆರವು ಒದಗಿಸುವ ಕಾರ್ಯದ ಉಸ್ತುವಾರಿಗೆ ಹಾಗೂ ಮೃತಪಟ್ಟವರ ದೇಹಗಳನ್ನು ಭಾರತಕ್ಕೆ ತ್ವರಿತವಾಗಿ ತರಲು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ತುರ್ತಾಗಿ ಕುವೈತ್‌ಗೆ ತೆರಳಿದ್ದು, ಅವರಿಂದ ಇನ್ನಷ್ಟು ಮಾಹಿತಿ ಪಡೆಯಲಾಗುವುದು ಎಂದು ಜೈಶಂಕರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT