ನವದೆಹಲಿ (ಪಿಟಿಐ): ಸುಮಾರು 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ವರ್ಷ ‘ಮೆಹರಮ್ (ಪುರುಷ ಸಂಗಾತಿ ಅಥವಾ ಪುರುಷ ಸಹಚರ)’ ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ಬಹುದೊಡ್ಡ ಪರಿವರ್ತನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಣ್ಣಿಸಿದ್ದಾರೆ.
‘ಮನ್ ಕಿ ಬಾತ್’ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಜ್ ನೀತಿಯಲ್ಲಿ ತಮ್ಮ ಸರ್ಕಾರವು ಮಾಡಿದ ಬದಲಾವಣೆಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ಹೆಚ್ಚು ಹೆಚ್ಚು ಜನರು ವಾರ್ಷಿಕ ಹಜ್ ಯಾತ್ರೆಗೆ ಹೋಗಲು ಅವಕಾಶ ಪಡೆಯುತ್ತಿದ್ದಾರೆ ಎಂದು ಹೇಳಿದರು.
‘ಈ ಬಾರಿ ಹಜ್ ಯಾತ್ರೆ ಕೈಗೊಂಡ ಮಹಿಳೆಯರ ಸಂಖ್ಯೆ 50 ಅಥವಾ 100 ಅಲ್ಲ, 4 ಸಾವಿರಕ್ಕೂ ಹೆಚ್ಚು. ಈ ಬಾರಿ ಹಜ್ ಯಾತ್ರೆಯಿಂದ ಮರಳಿದ ಮಹಿಳೆಯರಿಂದ ತಮಗೆ ಹೆಚ್ಚು ಪತ್ರಗಳು ಬಂದಿವೆ. ಈ ಹಿಂದೆ ಮುಸ್ಲಿಂ ಮಹಿಳೆಯರಿಗೆ ‘ಮೆಹರಮ್’ ಇಲ್ಲದೆ ಹಜ್ ಯಾತ್ರೆ ಕೈಗೊಳ್ಳಲು ಅವಕಾಶವಿರಲಿಲ್ಲ. ಇದಕ್ಕೆ ಅವಕಾಶ ಕಲ್ಪಿಸಿದ ಸೌದಿ ಅರೆಬಿಯಾ ಸರ್ಕಾರಕ್ಕೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವೆ’ ಎಂದೂ ಅವರು ಹೇಳಿದ್ದಾರೆ.
ಹಜ್ ಯಾತ್ರೆ ವೇಳೆ ಪುರುಷ ಸಂಗಾತಿ ಜತೆಗಿರಬೇಕೆಂಬ ನಿಯಮ ಕಡ್ಡಾಯವಾಗಿತ್ತು. 2018ರಲ್ಲಿ ಈ ನಿಯಮ ತೆಗೆದು ಹಾಕಿದ ನಂತರ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಪುರುಷ ಸಂಗಾತಿ ಇಲ್ಲದೇ ಈ ವರ್ಷ ಹಜ್ ಯಾತ್ರೆ ನಡೆಸಿದ್ದಾರೆ.