ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷೆ: 35 ವರ್ಷಗಳಲ್ಲಿ 42 ಸಂಸದರು ಅನರ್ಹ

ಪ್ರಜಾ ಪ್ರಾತಿನಿಧ್ಯ ಕಾಯ್ದೆ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ
Published 7 ಮೇ 2023, 13:04 IST
Last Updated 7 ಮೇ 2023, 13:04 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ನಂತರ 1988ರಿಂದ ಈ ವರೆಗೆ ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿ 42 ಸಂಸದರು ಅನರ್ಹಗೊಂಡಿದ್ದಾರೆ. 14ನೇ ಲೋಕಸಭಾ ಅವಧಿಯಲ್ಲಿ (2004-2009) ಗರಿಷ್ಠ 19 ಸಂಸದರು ತಮ್ಮ ಲೋಕಸಭಾ ಸದಸ್ಯತ್ವ ಕಳೆದುಕೊಂಡಿದ್ದರು.

ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸೂರತ್‌ನ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಮಾರ್ಚ್ 23ರಂದು ತೀರ್ಪು ನೀಡಿತ್ತು. ಲೋಕಸಭಾ ಸಚಿವಾಲಯವು ಮಾರನೇ ದಿನವೇ ರಾಹುಲ್‌ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಿತ್ತು.

ಈ ವಿದ್ಯಮಾನವು, ಪ್ರಜಾ ಪ್ರಾತಿನಿಧ್ಯ ಕಾಯ್ದೆ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕ್ರಿಮಿನಲ್‌ ಪ್ರಕರಣದಲ್ಲಿ ಸಂಸದರು ಮತ್ತು ಶಾಸಕರಿಗೆ ನ್ಯಾಯಾಲಯವು ಎರಡು ಅಥವಾ ಎರಡಕ್ಕಿಂತ ಹೆಚ್ಚು ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗ, ಈ ಕಾಯ್ದೆ ಪ್ರಕಾರ ಸಹಜವಾಗಿಯೇ ಅವರು ಅನರ್ಹಗೊಳ್ಳುತ್ತಾರೆ.

ಕಳೆದ ಮೂರೂವರೆ ದಶಕದ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಸಂಸದರನ್ನು ಅನರ್ಹಗೊಳಿಸಲಾಗಿದೆ. ಪಕ್ಷ ನಿಷ್ಠೆ ಬದಲಾಯಿಸಿದ್ದು, ಸಂಸದೀಯ ಶಿಷ್ಟಾಚಾರಕ್ಕೆ ವ್ಯತಿರಿಕ್ತವಾಗಿ ವರ್ತಿಸಿದ್ದು, ಎರಡು ಹಾಗೂ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯಗಳಲ್ಲಿ ಕೋರ್ಟ್‌ನಿಂದ ಶಿಕ್ಷೆಗೆ ಗುರಿಯಾಗಿರುವ ಕಾರಣಗಳಿಂದಾಗಿ ಹಲವರು ಅನರ್ಹಗೊಂಡಿರುವ ಉದಾಹರಣೆಗಳಿವೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎನ್‌ಸಿಪಿ ಮುಖಂಡ ಮೊಹಮ್ಮದ್‌ ಫೈಜಲ್‌ ಪಿ.ಪಿ ಹಾಗೂ ಬಿಎಸ್‌ಪಿ ನಾಯಕ ಅಫ್ಜಲ್ ಅನ್ಸಾರಿ ಅವರು ಇತ್ತೀಚೆಗೆ, ಎರಡು ಹಾಗೂ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾರಣ ಸಂಸದ ಸ್ಥಾನದಿಂದ ಅನರ್ಹಗೊಂಡವರಾಗಿದ್ದಾರೆ. 

ಲಕ್ಷದ್ವೀಪ ಸಂಸದರಾದ ಫೈಜಲ್‌ ಅವರು ಕೊಲೆ ಯತ್ನ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಕ್ಕಾಗಿ ಅವರನ್ನು ಅನರ್ಹಗೊಳಿಸಲಾಗಿತ್ತು. ಆದರೆ, ಅವರ ವಿರುದ್ದದ ತೀರ್ಪು ಹಾಗೂ ಶಿಕ್ಷೆಗೆ ಕೇರಳ ಹೈಕೋರ್ಟ್‌ ತಡೆ ನೀಡಿದ ಕಾರಣ ಅವರ ಅನರ್ಹತೆಯನ್ನು ರದ್ದುಪಡಿಸಲಾಗಿದೆ.

‘ಮೋದಿ ಉಪನಾಮ’ ಬಳಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್‌ ಅವರು, ಶಿಕ್ಷೆಗೆ ತಡೆ ಕೋರಿ ಗುಜರಾತ್‌ ಹೈಕೋರ್ಟ್‌ ಮೊರೆ ಹೋಗಿದ್ದು, ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT