ಗುವಾಹಟಿ: ಎನ್‌ಐಎ ಮತ್ತು ಅಸ್ಸಾಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ಒಟ್ಟು 47 ಜನರನ್ನು ಏಳು ರಾಜ್ಯಗಳಿಂದ ಬಂಧಿಸಿದೆ.
ಕರ್ನಾಟಕದಲ್ಲಿ 9 ಮಂದಿ, ತ್ರಿಪುರಾದಲ್ಲಿ 25 ಮಂದಿ, ಅಸ್ಸಾಂನಲ್ಲಿ 5, ಪಶ್ಚಿಮ ಬಂಗಾಳದಲ್ಲಿ ಮೂವರು, ತಮಿಳುನಾಡಿನ ಮೂವರು, ಹಾಗೂ ಹರಿಯಾಣ ಮತ್ತು ತೆಲಂಗಾಣದಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ ಎಂದು ಅಸ್ಸಾಂನ ಪೊಲೀಸ್ ವಿಶೇಷ ಡಿಜಿಪಿ ಹರ್ಮೀತ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಎನ್ಐಎಯ ಒಟ್ಟು 17 ತಂಡಗಳು ಅಸ್ಸಾಂ, ತ್ರಿಪುರ ಮತ್ತು ಉತ್ತರ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
2023ರ ಫೆಬ್ರವರಿಯಲ್ಲಿ ತ್ರಿಪುರಾದಿಂದ ಅಸ್ಸಾಂಗೆ ಬರುತ್ತಿದ್ದ ರೋಹಿಂಗ್ಯಾಗಳ ತಂಡವನ್ನು ಪತ್ತೆಮಾಡಲಾಗಿತ್ತು. ಆ ಬಗ್ಗೆ ತನಿಖೆ ನಡೆಸಿದ ಬಳಿಕ ಅವರೆಲ್ಲರೂ ಭಾರತ– ಬಾಂಗ್ಲಾದೇಶ ಗಡಿಯ ಮೂಲಕ ಅಕ್ರಮವಾಗಿ ದೇಶವನ್ನು ಪ್ರವೇಶಿಸುತ್ತಿರುವುದು ಬಹಿರಂಗವಾಗಿತ್ತು.
ಇದು ಅಸ್ಸಾಂ ಪೊಲೀಸರು ಹೆಚ್ಚಿನ ನಿಗಾ ಇರಿಸಲು ಕಾರಣವಾಯಿತು. ಅಲ್ಲದೆ ಗಡಿ ಕಾವಲು ಪಡೆಗಳ ನೆರವಿನೊಂದಿಗೆ 450 ಅಕ್ರಮ ವಲಸಿಗರು, ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳನ್ನು ಹಿಂತಿರುಗಿಸಲಾಗಿದೆ ಎಂದು ಅವರು ಹೇಳಿದರು.