ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಬಿಜೆಪಿ ಸೇರ್ಪಡೆ ಸಮರ್ಥಿಸಿಕೊಂಡ ಎ.ಕೆ. ಆ್ಯಂಟನಿ ಪತ್ನಿ

Published 23 ಸೆಪ್ಟೆಂಬರ್ 2023, 11:04 IST
Last Updated 23 ಸೆಪ್ಟೆಂಬರ್ 2023, 11:04 IST
ಅಕ್ಷರ ಗಾತ್ರ

ತಿರುವನಂತಪುರಂ: ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿ ಅವರ ಪತ್ನಿ ಎಲಿಜಬೆತ್‌ ತಮ್ಮ ಮಗ ಬಿಜೆಪಿ ಸೇರಿರುವುದನ್ನು ಸಮರ್ಥಿಸಿಕೊಂಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕೇರಳದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಕ್ರಿಶ್ಚಿಯನ್ ಮೆಡಿಟೆಷನ್‌ ಸೆಂಟರ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾದ ಈ ವಿಡಿಯೊದಲ್ಲಿ, ಎಲಿಜಬೆತ್‌ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಕೇಸರಿ ಪಾಳಯದಿಂದ ತಮ್ಮ ಮಗ ಅನಿಲ್ ಆ್ಯಂಟನಿಗೆ ಆಹ್ವಾನ ಬಂದಿರುವ ಬಗ್ಗೆ ಬಹಳ ಹಿಂದೆಯೇ ತಮಗೆ ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ.

ನನ್ನ ಪ್ರಾರ್ಥನೆಯಿಂದಲೇ ಮಗನಿಗೆ ರಾಜಕೀಯದಲ್ಲಿ ಹೊಸ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡಿರುವ ಅವರು, ಬಿಜೆಪಿಗೆ ಮಗನ ಅನಿರೀಕ್ಷಿತ ಪ್ರವೇಶದಿಂದಾಗಿ ಕುಟುಂಬದಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ಪರಿಹರಿಸಲು ಕೂಡ ನನ್ನ ಪ್ರಾರ್ಥನೆ ಸಹಾಯ ಮಾಡಿದೆ ಎಂದಿದ್ದಾರೆ.

‘ನನ್ನ ಇಬ್ಬರು ಪುತ್ರರು ರಾಜಕೀಯಕ್ಕೆ ಸೇರಲು ಬಯಸಿದ್ದರು. ಇತ್ತೀಚೆಗೆ ನಡೆದ ‘ಚಿಂತನ್‌ ಶಿಬಿರ’ ದಲ್ಲಿ ವಂಶ ರಾಜಕಾರಣದ ವಿರುದ್ಧ ಕಾಂಗ್ರೆಸ್ ಪಕ್ಷ ನಿರ್ಣಯವೊಂದನ್ನು ತೆಗೆದುಕೊಂಡಿದ್ದು, ಇದು ನನ್ನ ಮಕ್ಕಳ ರಾಜಕೀಯ ಕನಸಿಗೆ ಅಡ್ಡಿಯಾಗಿತ್ತು’ ಎಂದು ಮಗನ ಬಿಜೆಪಿ ಸೇರ್ಪಡೆಗೆ ಕಾಂಗ್ರೆಸ್‌ ನಿರ್ಣಯ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.

‘ನನ್ನ ಮಗನಿಗೆ 39 ವರ್ಷ. ಆತನಿಗೆ ಉತ್ತಮ ಭವಿಷ್ಯ ಸಿಗಲಿ ಎಂದು ಪ್ರಾರ್ಥಿಸಿದ್ದೆ. ಆ ವೇಳೆಯೇ ಬಿಜೆಪಿಗೆ ಸೇರ್ಪಡೆಯಾಗುವಂತೆ ಆಹ್ವಾನಿಸಿ ಅನಿಲ್‌ಗೆ ಪ್ರಧಾನಿ ಅವರ ಕಚೇರಿಯಿಂದ ಕರೆ ಬಂದಿತ್ತು. ಈ ವಿಷಯವನ್ನು ಮಗ ನನಗೆ ಫೋನ್‌ ಮಾಡಿ ತಿಳಿಸಿದ್ದನು’ ಎಂದು ಎಲಿಜಬೆತ್‌ ತಿಳಿಸಿದ್ದಾರೆ.

‘ನಾನು ಮತ್ತು ನನ್ನ ಕುಟುಂಬ ಕಾಂಗ್ರೆಸ್‌ ಅನ್ನೇ ನಂಬಿ ಬದುಕುತ್ತಿದ್ದೇವೆ. ಆದರೆ ಬಿಜೆಪಿಗೆ ಸೇರಿದರೆ ಉತ್ತಮ ಅವಕಾಶ ಸಿಗುತ್ತದೆ ಎಂದು ನನ್ನ ಮಗ ನಂಬಿದ್ದಾನೆ. ಮಗ ಬಿಜೆಪಿ ಸೇರುವುದನ್ನು ಮೊದಲಿಗೆ ತಿರಸ್ಕರಿಸಿದ್ದು, ಪ್ರಾರ್ಥನೆಯ ಮೂಲಕ ಆ ಆಲೋಚನೆಯನ್ನು ಬದಲಾಯಿಸಿಕೊಂಡೆ. ಅನಿಲ್‌ ಬಿಜೆಪಿಗೆ ಸೇರುವ ವಿಷಯವನ್ನು ಕುಟುಂಬದ ಯಾರಿಗೂ ತಿಳಿಸಿರಲಿಲ್ಲ’ ಎಂದರು

‘ಅನಿಲ್‌ ಬಿಜೆಪಿ ಸೇರ್ಪಡೆಗೊಂಡಿರುವ ಬಗ್ಗೆ ಮೊದಲಿಗೆ ಎ.ಕೆ. ಆ್ಯಂಟನಿಗೆ ತಿಳಿದಿರಲಿಲ್ಲ. ನಾಲ್ಕು ದಿನಗಳ ನಂತರ ಟಿವಿಯಲ್ಲಿ ನೋಡಿ ಅವರು ಆಘಾತಗೊಂಡಿದ್ದರು’ ಎಂದು ಹೇಳಿದ್ದಾರೆ.

ಕಳೆದ ಎಪ್ರಿಲ್‌ನಲ್ಲಿ ಅನಿಲ್‌ ಆ್ಯಂಟಿನಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿಗೆ ಸೇರುವ ವೇಳೆ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ ಅನಿಲ್‌, ಕಾಂಗ್ರೆಸ್‌ ದೇಶಕ್ಕಾಗಿ ದುಡಿಯದೇ ಒಂದು ಕುಟುಂಬದ ಹಿತಾಸಕ್ತಿಗೆ ಶ್ರಮಿಸುತ್ತಿದೆ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT