ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್, ಎಎಪಿ ಭ್ರಷ್ಟಾಚಾರದ ದ್ಯೋತಕ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಕಿಡಿ

Published 4 ಜನವರಿ 2024, 16:16 IST
Last Updated 4 ಜನವರಿ 2024, 16:16 IST
ಅಕ್ಷರ ಗಾತ್ರ

ದಿಯು: ಅತ್ಯಂತ ಪ್ರಾಮಾಣಿಕವಾಗಿ ಇರುವುದಾಗಿ ಹೇಳಿ ಅಧಿಕಾರಕ್ಕೇರಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಭ್ರಷ್ಟಾಚಾರದ ದ್ಯೋತಕವಾಗಿ ಬದಲಾಗಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಗುರುವಾರ ಆರೋಪಿಸಿದ್ದಾರೆ.

ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರ ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯುವ ವೇಳೆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ದೆಹಲಿ ಲೆಫ್ಟಿನಂಟ್‌ ಗವರ್ನರ್‌ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದಾರೆ. ಇದನ್ನು ಉಲ್ಲೇಖಿಸಿ ಠಾಕೂರ್‌ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ತಮ್ಮನ್ನು ತಾವು ಅತ್ಯಂತ ಪ್ರಾಮಾಣಿಕರೆಂದು ಹೇಳಿಕೊಂಡು ರಾಜಕೀಯಕ್ಕೆ ಬಂದ ಕೇಜ್ರಿವಾಲ್ ಮತ್ತು ಅವರ ಸರ್ಕಾರ ಇದೀಗ, ಭ್ರಷ್ಟಾಚಾರದ ದ್ಯೋತಕವಾಗಿ ಬದಲಾಗಿದ್ದಾರೆ' ಎಂದು ದೂರಿದ್ದಾರೆ.

ಮೊಹ‌ಲ್ಲಾ ಕ್ಲಿನಿಕ್‌ ವಿಚಾರವಾಗಿ ಹರಿಹಾಯ್ದಿರುವ ಬಿಜೆಪಿ ನಾಯಕ, 'ಮೊದಲು ನಕಲಿ ಔಷಧ ಹಗರಣ ಬೆಳಕಿಗೆ ಬಂದಿತು. ಇದೀಗ ನಕಲಿ ಆರೋಗ್ಯ ತಪಾಸಣೆ ಬಹಿರಂಗಗೊಂಡಿದೆ. ಇದು ಜನರ ಬದುಕಿನ ಮೇಲಿನ ದಾಳಿಯಾಗಿದೆ. ಸರ್ಕಾರವೇ ನಕಲಿಯಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಮದ್ಯ ನೀತಿ ಜಾರಿಗೊಳಿಸಿದ್ದ ವೇಳೆ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಕೇಜ್ರಿವಾಲ್‌ ಅವರಿಗೆ ಮೂರು ಬಾರಿ ಸಮನ್ಸ್‌ ಜಾರಿ ಮಾಡಿದೆ. ಆದರೂ ಅವರು ವಿಚಾರಣೆಗೆ ಹಾಜರಾಗಿಲ್ಲ.

ಇದರ ವಿರುದ್ಧವೂ ಕಿಡಿಕಾರಿರುವ ಠಾಕೂರ್‌, 'ಒಂದಾದ ಮೇಲೊಂದು ಹಗರಣಗಳು ಬಯಲಾಗುತ್ತಿವೆ. ತಮ್ಮನ್ನು ತಾವು ಪ್ರಾಮಾಣಿಕರು ಎಂದು ಹೇಳಿಕೊಂಡ ಒಬ್ಬ ನಾಯಕನೂ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿಲ್ಲ. ಉಪ ಮುಖ್ಯಮಂತ್ರಿ, ಸಚಿವರು ಹಾಗೂ ಸಂಸದರು ಜೈಲಿನಲ್ಲಿದ್ದಾರೆ' ಎಂದು ಚಾಟಿ ಬೀಸಿದ್ದಾರೆ.

'ಕೇಜ್ರಿವಾಲ್‌ ಇ.ಡಿ ಎದುರು ಹಾಜರಾಗಲು ಹೆದರುತ್ತಿರುವುದೇಕೆ? ಅವರು ಕಾನೂನಿಗಿಂತ ದೊಡ್ಡವರೇ?' ಎಂದೂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT