ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಆತಿಶಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಇವರೊಂದಿಗೆ ಐವರು ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಲ್ಲಿನ ರಾಜ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಪ್ರಮಾಣವಚನ ಬೋಧಿಸಿದರು.
ಶಾಸಕಿಯಾಗಿ ಆಯ್ಕೆಯಾದ ತಮ್ಮ ಮೊದಲ ಅವಧಿಯಲ್ಲೇ ಆತಿಶಿ ಅವರು ದೆಹಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದಾರೆ. ಇವರು ಈಗ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ. ಸ್ವತಂತ್ರ ಭಾರತದ 17ನೇ ಮಹಿಳಾ ಮುಖ್ಯಮಂತ್ರಿ ಹಾಗೂ ದೆಹಲಿಯ ಎಂಟನೇ ಮುಖ್ಯಮಂತ್ರಿ ಆಗಿದ್ದಾರೆ. ದೇಶದಲ್ಲಿ, ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾತ್ರವೇ ಮಹಿಳಾ ಮುಖ್ಯಮಂತ್ರಿ. ಈಗ ಅವರೊಂದಿಗೆ ಆತಿಶಿ ಸೇರ್ಪಡೆಯಾಗಿದ್ದಾರೆ.
ಆತಿಶಿ ಅವರು ದೆಹಲಿಯ ಅತಿ ಕಿರಿಯ ಮಹಿಳಾ ಮುಖ್ಯಮಂತ್ರಿಯೂ ಹೌದು. ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಅವರು ತಮ್ಮ 60ನೇ ವಯಸ್ಸಿಗೆ ಹಾಗೂ ಬಿಜೆಪಿಯ ಸುಷ್ಮಾ ಸ್ವರಾಜ್ ಅವರು ತಮ್ಮ 46ನೇ ವಯಸ್ಸಿಗೆ ಮುಖ್ಯಮಂತ್ರಿಯಾಗಿದ್ದರು. ಆತಿಶಿ ಅವರು ತಮ್ಮ 43ನೇ ವಯಸ್ಸಿಗೆ ಈಗ ದೆಹಲಿಯ ಗದ್ದುಗೆ ಏರಿದ್ದಾರೆ.
ಸಮಾರಂಭಕ್ಕೂ ಮುನ್ನಾ ಆತಿಶಿ ಸೇರಿದಂತೆ ಐವರು ಸಚಿವರು ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು.
ಕಾರ್ಯಕ್ರಮದಲ್ಲಿ ಆತಿಶಿ ಅವರ ತಂದೆ ವಿಜಯ್ ಸಿಂಗ್ ಹಾಗೂ ತಾಯಿ ತೃಪ್ತಾ ವಾಹೀ, ಅರವಿಂದ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಪಕ್ಷದ ಶಾಸಕರು ಹಾಗೂ ಇತರ ನಾಯಕರು ಭಾಗವಹಿಸಿದ್ದರು. ಜೊತೆಗೆ, ವಿಧಾನಸಭೆಯ ಸ್ಪೀಕರ್ ರಾಮ್ ನಿವಾಸ್ ಗೋಯಲ್, ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಕೇಂದ್ರದ ರಾಜ್ಯ ಖಾತೆ ಸಚಿವ ಹರ್ಷ್ ಮಲ್ಹೋತ್ರಾ ಸೇರಿದಂತೆ ಬಿಜೆಪಿ ಸಂಸದರೂ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿದ್ಯುತ್ ನೀರಿನ ದರಗಳನ್ನು ಕಡಿಮೆ ಮಾಡಿ ದೆಹಲಿ ಗ್ರಾಮಾಂತರ ಭಾಗದ ಜನರ ಆಸ್ತಿ ತೆರಿಗೆಯನ್ನು ಮನ್ನಾ ಮಾಡುವುದರ ಮೂಲಕ ಹೊಸ ಸರ್ಕಾರವು ಜನರಿಗೆ ಅನುಕೂಲ ಮಾಡಿಕೊಡಬೇಕು.–ರಾಮ್‌ವೀರ್ ಸಿಂಗ್ ಬಿಧೂಡಿ, ದಕ್ಷಿಣ ದೆಹಲಿ ಕ್ಷೇತ್ರದ ಬಿಜೆಪಿ ಸಂಸದ
ದೆಹಲಿ ಜನರ ಸೇವೆಯೇ ನಮ್ಮ ಆದ್ಯತೆ. ವಿಶೇಷ ಸಂದರ್ಭದಲ್ಲಿ ಸರ್ಕಾರವು ಬದಲಾಗಿದೆ. ಕೇಜ್ರಿವಾಲ್ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ.–ಗೋಪಾಲ್ ರೈ, ಸಚಿವ
ನನ್ನ ಪಾಲಿಗೆ ಈ ದಿನ ಭಾವನಾತ್ಮಕವಾದುದು. ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿಲ್ಲ. ಕೇಜ್ರಿವಾಲ್ ಆಡಳಿತದಲ್ಲಿ ಜನರು ಅನುಭವಿಸುತ್ತಿದ್ದ ಸೌಲಭ್ಯಗಳನ್ನು ರದ್ದು ಮಾಡಲು ಬಿಜೆಪಿ ಯತ್ನಿಸಿತು. ಈಗ ಕೇಜ್ರಿವಾಲ್ ಅವರು ಜೈಲಿನಿಂದ ಹೊರಬಂದಿದ್ದಾರೆ. ಬಿಜೆಪಿಯ ಯಾವ ಕುತಂತ್ರವೂ ಫಲಿಸುವುದಕ್ಕೆ ನಾವು ಬಿಡುವುದಿಲ್ಲ.–ಆತಿಶಿ, ದೆಹಲಿ ಮುಖ್ಯಮಂತ್ರಿ
आतिशी जी ने ली मुख्यमंत्री पद की शपथ🔥
— AAP (@AamAadmiParty) September 21, 2024
अब @AtishiAAP जी दिल्ली में केजरीवाल जी की काम की राजनीति को बढ़ाएंगी आगे💯 pic.twitter.com/3MTOv6xgmH
ಐವರು ಸಚಿವರ ಸಂಪುಟ
ಸೌರಬ್ ಭಾರದ್ವಾಜ್ ಗೋಪಾಲ್ ರೈ ಕೈಲಾಶ್ ಗೆಹಲೋತ್ ಇಮ್ರಾನ್ ಹುಸೇನ್ ಹಾಗೂ ಮುಕೇಶ್ ಅಹ್ಲಾವತ್ ಅವರು ಶನಿವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಮುಕೇಶ್ ಅವರು ಮೊದಲ ಬಾರಿಗೆ ಶಾಸಕರಾದವರು. ತಮ್ಮ ಮೊದಲ ಅವಧಿಯಲ್ಲೇ ಈಗ ಸಚಿವರೂ ಆಗಿದ್ದಾರೆ. ಆತಿಶಿ ಅವರು ಹಣಕಾಸು ವಿದ್ಯುತ್ ಜಲ ಹಾಗೂ ಶಿಕ್ಷಣ ಖಾತೆಗಳಂತಹ ಪ್ರಮುಖ 13 ಖಾತೆಗಳನ್ನು ನಿರ್ವಹಿಸಲಿದ್ದಾರೆ.
ಭಾರದ್ವಾಜ್ ಅವರ ಬಳಿ ನಗರಾಭಿವೃದ್ಧಿ ಆರೋಗ್ಯ ಹಾಗೂ ನೀರಾವರಿ ಸೇರಿದಂತೆ ಎಂಟು ಖಾತೆಗಳಿರಲಿವೆ. ರೈ ಗೆಹಲೋತ್ ಹಾಗೂ ಹುಸೇನ್ ಅವರು ತಮ್ಮ ಹಿಂದಿನ ಖಾತೆಗಳನ್ನೇ ನಿರ್ವಹಿಸಲಿದ್ದಾರೆ. ಮುಕೇಶ್ ಅವರಿಗೆ ಎಸ್‌ಸಿ ಎಸ್‌ಟಿ ಕಾರ್ಮಿಕ ಉದ್ಯೋಗ ಸೇರಿದಂತೆ ಕೆಲವು ಖಾತೆಗಳನ್ನು ನೀಡಲಾಗಿದೆ. ಸರ್ಕಾರವು ಒಟ್ಟು ಏಳು ಸಚಿವರನ್ನು ನೇಮಿಸಿಕೊಳ್ಳಬಹುದು. ಎಎಪಿಯು ಮುಂದಿನ ದಿನಗಳಲ್ಲಿ ಮತ್ತೊಬ್ಬ ಸಚಿವರನ್ನು ನೇಮಿಸಿಕೊಳ್ಳಲಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.