ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಜ್ರಿವಾಲ್‌’ ಮುಖವಾಡ ಧರಿಸಿ ವಿಧಾನಸಭೆಗೆ ಬಂದ ಎಎಪಿ ಶಾಸಕರು

Published 27 ಮಾರ್ಚ್ 2024, 13:42 IST
Last Updated 27 ಮಾರ್ಚ್ 2024, 13:42 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನವನ್ನು ಖಂಡಿಸಿ ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕರು ಹಳದಿ ಬಣ್ಣದ ಟಿ–ಶರ್ಟ್‌ ಮತ್ತು ‘ಕೇಜ್ರಿವಾಲ್‌ ಮುಖವಾಡ’ ಹಾಕಿಕೊಂಡು ಬುಧವಾರ ವಿಧಾನಸಭೆಗೆ ಬಂದಿದ್ದರು.

ಸಚಿವರಾದ ಆತಿಶಿ ಮತ್ತು  ಸೌರಭ್ ಭಾರದ್ವಾಜ್‌ ಸೇರಿದಂತೆ ಎಎಪಿ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಆರಂಭಿಸಿದ್ದ ಅಭಿಯಾನವನ್ನು ಸಾಂಕೇತಿಕವಾಗಿ ವಿಧಾನಸಭೆ ತಂದಿದ್ದರು. ಅವರು ಧರಿಸಿದ್ದ ಟಿ–ಶರ್ಟ್‌ ಮೇಲೆ ‘ನಾನೂ ಕೇಜ್ರಿವಾಲ್’, ‘ಮೋದಿ ಅತಿ ಹೆಚ್ಚು ಭಯ ಪಡುವ ವ್ಯಕ್ತಿ ಕೇಜ್ರಿವಾಲ್‌’ ಎಂದು ಬರೆದಿತ್ತು.

ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಎಎಪಿ ನಾಯಕರು ಸದನದಲ್ಲಿ ಬಿಜೆಪಿ ವಿರುದ್ಧ ‘ಧಿಕ್ಕಾರ’ದ ಘೋಷಣೆ ಕೂಗಿದರು. ಗದ್ದಲ ಉಂಟಾದ ಕಾರಣ ಕಲಾಪವನ್ನು ಏ.1ಕ್ಕೆ ಮುಂದೂಡಲಾಯಿತು.

ನಂತರ ಮಾತನಾಡಿದ ಆತಿಶಿ, ‘ಕೇಜ್ರಿವಾಲ್ ಅವರ  ಅಕ್ರಮ ಬಂಧನವನ್ನು ಖಂಡಿಸಿ ಎಎಪಿಯ ಎಲ್ಲಾ ಶಾಕಸರು ಪ್ರತಿಭಟಿಸುತ್ತಿದ್ದಾರೆ. ದೇಶದಿಂದ ಪ್ರಜಾಪ್ರಭುತ್ವವನ್ನು ತೊಲಗಿಸುವ ಯತ್ನ ನಡೆಯುತ್ತಿದೆ. ಭಾರತ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಲಾಗಿದೆ, ಅದೂ ಲೋಕಸಭಾ ಚುನಾವಣೆಗೂ ಕೆಲವೇ ದಿನ ಮುನ್ನ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಜ್ರಿವಾಲ್‌ ಬಂಧನವನ್ನು ಖಂಡಿಸಿ ಎಎಪಿ ಸೋಮವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಆರಂಭಿಸಿದೆ. ಪಕ್ಷದ ನಾಯಕರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ‘ಡಿಪಿ’ಯಲ್ಲಿ ಕಂಬಿ ಹಿಂದಿರುವ ಕೇಜ್ರಿವಾಲ್‌ ಅವರ ಭಾವಚಿತ್ರವನ್ನು ಹಾಕಿಕೊಂಡಿದ್ದಾರೆ.

ರಾಜೀನಾಮೆಗೆ ಆಗ್ರಹ

ಕಲಾಪ ಮುಂದೂಡಿದ ನಂತರ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ಅವರ ನೇತೃತ್ವದಲ್ಲಿ ಪಕ್ಷದ ನಾಯಕರು ಸಹ ಪ್ರತಿಭಟನೆ ನಡೆಸಿ ಕೇಜ್ರಿವಾಲ್‌ ರಾಜೀನಾಮೆಗೆ ಒತ್ತಾಯಿಸಿದರು.

ಪಕ್ಷದ ಶಾಸಕರು ಮತ್ತು ಕಾರ್ಯಕರ್ತರು ವಿಧಾನಸಭೆ ಆವರಣದಲ್ಲಿ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT