ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌ ಅಕ್ರಮ: ಎಎಪಿಯಿಂದ ಪ್ರತಿಭಟನೆ

Published 19 ಜೂನ್ 2024, 13:49 IST
Last Updated 19 ಜೂನ್ 2024, 13:49 IST
ಅಕ್ಷರ ಗಾತ್ರ

ಮುಂಬೈ: ನೀಟ್‌ ಪರೀಕ್ಷಾ ಅಕ್ರಮ ವಿರೋಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ಎಎಪಿಯು, ಮುಂಬೈನ ದಾದರ್‌ನಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಂಡು, ಹೊಸದಾಗಿ ಪರೀಕ್ಷೆ ನಡೆಸುವಂತೆ ಒತ್ತಾಯಿಸಿತು.

ನೀಟ್‌– ಯುಜಿ ಅಕ್ರಮವು 24 ಲಕ್ಷ ವೈದ್ಯಕೀಯ ಪದವಿ ಆಕಾಂಕ್ಷಿಗಳ ಮೇಲೆ ಮಾತ್ರ ದುಷ್ಪರಿಣಾಮ ಬೀರುವುದಿಲ್ಲ. ಬದಲಾಗಿ, ಸಂಪೂರ್ಣ ಯುವ ಭಾರತದ ಮೇಲೆಯೇ ಪರಿಣಾಮ ಬೀರುತ್ತದೆ ಎಂದು ಎಎಪಿ ಮುಂಬೈ ಕಾರ್ಯಕಾರಿ ಅಧ್ಯಕ್ಷ ರುಬೆನ್‌ ಮಸ್ಕಾರೆನ್ಹಾಸ್‌ ಅವರು ಹೇಳಿದರು. 

ಇದು ‘ರಾಷ್ಟ್ರಕ್ಕೆ ಅಪಕೀರ್ತಿ ತಂದ ಕೃತ್ಯ’ವಾಗಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಕ್ಷದ ಮುಂಬೈ ಘಟಕದ ಉಪಾಧ್ಯಕ್ಷ ಸಂದೀಪ್‌ ಕಾಟ್ಕೆ ಆಗ್ರಹಿಸಿದ್ದಾರೆ.

ಈಗ ನಡೆದಿರುವ ನೀಟ್‌ ಪರೀಕ್ಷೆಯನ್ನು ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಬೇಕು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು. ತಪ್ಪಿತಸ್ಥರು, ಅದರಲ್ಲೂ ಅಕ್ರಮದಲ್ಲಿ ಭಾಗಿಯಾಗಿರುವ ಬಿಜೆಪಿ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಎಪಿ ಮುಂಬೈನ ಮತ್ತೊಬ್ಬ ನಾಯಕ ಪೌಲ್‌ ರಫೇಲ್‌ ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಪ್ರತಿಭಟನೆ ನಾಳೆ 

ನೀಟ್‌– ಯುಜಿ ಪರೀಕ್ಷಾ ಅಕ್ರಮದ ವಿಚಾರವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿಷ್ಕ್ರಿಯವಾಗಿರುವುದರ ವಿರುದ್ಧ ಕಾಂಗ್ರೆಸ್‌ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಲಿದೆ. ಎಲ್ಲಾ ರಾಜ್ಯಗಳಲ್ಲಿಯ ಪಕ್ಷದ ಮುಖ್ಯ ಕಚೇರಿಗಳಲ್ಲಿ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲು ಪಕ್ಷವು ನಿರ್ಧರಿಸಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ತಿಳಿಸಿದರು. ಮುಂದಿನ ಸೋಮವಾರದಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲಿದೆ. ಅಷ್ಟರ ಒಳಗೆ ನೀಟ್‌ ವಿಚಾರವಾಗಿ ಪ್ರತಿಭಟನೆ ತೀವ್ರಗೊಳಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ರಾಜ್ಯ ಘಟಕಗಳ ಮುಖ್ಯಸ್ಥರು ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರ ಪ್ರಮುಖ ಪದಾಧಿಕಾರಿಗಳಿಗೆ ಈ ಕುರಿತು ಈಗಾಗಲೇ ಪತ್ರ ಕಳಿಸಲಾಗಿದೆ ಎಂದು ವೇಣುಗೋಪಾಲ್‌ ಅವರು ತಿಳಿಸಿದರು. ‘ನೀಟ್‌– ಯುಜಿ 2024 ಪರೀಕ್ಷೆ ನಡೆಸಿದ ರೀತಿ ಮತ್ತು ಫಲಿತಾಂಶದ ಕುರಿತು ಹಲವಾರು ದೂರುಗಳು ಬರುತ್ತಿವೆ. ಆ ಕುರಿತು ನಾವು ಗಮನ ಹರಿಸಬೇಕು’ ಎಂದರು. 

‘ಪರೀಕ್ಷಾ ಪ್ರಕ್ರಿಯೆಯಲ್ಲಿ ಹಲವಾರು ತಾಂತ್ರಿಕ ದೋಷಗಳು ನುಸುಳಿವೆ. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳು ನಡೆದಿವೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಸಂಘಟಿತ ಭ್ರಷ್ಟಾಚಾರ ನಡೆದಿದೆ ಎಂಬುದು ಬಿಹಾರ ಗುಜರಾತ್‌ ಮತ್ತು ಹರಿಯಾಣ ರಾಜ್ಯಗಳಲ್ಲಿ ನಡೆದಿರುವ ಬಂಧನಗಳಿಂದ ತಿಳಿದುಬಂದಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪರೀಕ್ಷಾ ಅಕ್ರಮ ಹೇಗೆ ನಡೆಯುತ್ತಿದೆ ಎಂಬುದಕ್ಕೂ ಈ ಬಂಧನಗಳು ಸಾಕ್ಷಿಯಾಗಿವೆ’ ಎಂದು ವೇಣುಗೋಪಾಲ್‌ ಹೇಳಿದ್ದಾರೆ. ‘ಈ ಅಕ್ರಮದ ಗಂಭೀರತೆಯನ್ನು ಸುಪ್ರೀಂ ಕೋರ್ಟ್‌ ಕೂಡಾ ಎತ್ತಿಹಿಡಿದಿದೆ. ಈ ವಿಚಾರದಲ್ಲಿ ಅಲ್ಪ ಪ್ರಮಾಣದ ದೋಷವನ್ನೂ ಸಹಿಸುವುದಿಲ್ಲ ಎಂದು ಹೇಳಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT