ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನನ್ನು ನೇಣಿಗೆ ಏರಿಸಿದರೂ ಎಎಪಿ ಅಂತ್ಯವಾಗದು: ಕೇಜ್ರಿವಾಲ್

Published 23 ಮೇ 2024, 14:23 IST
Last Updated 23 ಮೇ 2024, 14:23 IST
ಅಕ್ಷರ ಗಾತ್ರ

ನವದೆಹಲಿ: ‘ಜೈಲಿಗೆ ವಾಪಸ್‌ ಹೋಗುವ ಬಗ್ಗೆ ಚಿಂತೆಯಾಗಲಿ, ಉದ್ವಿಗ್ನತೆಯಾಗಲಿ ಇಲ್ಲ. ಹಿಂತಿರುಗಬೇಕಾದರೆ ಹಿಂತಿರುಗುತ್ತೇನೆ. ದೇಶವನ್ನು ಉಳಿಸಲು ಇದು ನನ್ನ ಹೋರಾಟದ ಭಾಗವೆಂದು ಭಾವಿಸುತ್ತೇನೆ’ ಎಂದು ಜೂನ್‌ 1ರಂದು ಮಧ್ಯಂತರ ಜಾಮೀನು ಕೊನೆಗೊಳ್ಳುವ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, ತಿಹಾರ್ ಜೈಲಿನಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.

‘ತಿಹಾರ್ ಜೈಲಿನಲ್ಲಿರುವಾಗ ಭಗವದ್ಗೀತೆಯನ್ನು ಎರಡು ಬಾರಿ ಓದಿದ್ದೇನೆ. ರಾಮಾಯಣ ಮತ್ತು ದೇಶದ ರಾಜಕೀಯದ ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳನ್ನೂ ಓದಿದ್ದೆ’ ಎಂದು ತಿಳಿಸಿದರು.

‘ಹಿಂತಿರುಗುವ ಭರವಸೆಯಿಲ್ಲದಿದ್ದರೂ ವರ್ಷಗಳ ಕಾಲ ಜೈಲುವಾಸವನ್ನು ಕಳೆದ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳು ತಿಹಾರ್‌ ಜೈಲಿನ ವಾಸವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನನಗೆ ನೀಡಿದ್ದವು. ಕೆಲವೇ ತಿಂಗಳಿನಲ್ಲಿ ಜೈಲಿನಿಂದ ಹೊರಬರುತ್ತೇನೆಂಬ ಭರವಸೆಯೂ ಇತ್ತು’ ಎಂದು ಹೇಳಿದರು.

‘ತಿಹಾರ್ ಜೈಲಿನಲ್ಲಿದ್ದಾಗ ನನ್ನ ಸೆಲ್‌ ಸುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ನನ್ನ ಪ್ರತಿ ಚಲನವಲನಗಳನ್ನು ಪ್ರಧಾನಮಂತ್ರಿ ಕಚೇರಿ ಮತ್ತು ಜೈಲಿನ 13 ಅಧಿಕಾರಿಗಳು ಗಮನಿಸುತ್ತಿದ್ದರು. ನಾನು ಅಳುತ್ತಿದ್ದೆನಾ ಅಥವಾ ಖಿನ್ನತೆಗೆ ಜಾರಿದ್ದೇನಾ ಎಂದು ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ನನಗೆ ತಿಳಿಸಿದ್ದರು’ ಎಂದು ಆರೋಪಿಸಿದರು.

‘ನಿಮ್ಮ ಪ್ರತಿಯೊಂದು ಚಲನವಲನವನ್ನು 24 ಗಂಟೆಗಳ ಕಾಲ ಗಮನಿಸುವುದನ್ನು ಕಲ್ಪಿಸಿಕೊಳ್ಳಿ. ಇದು ನಿಜಕ್ಕೂ ಕಷ್ಟಕರವಾಗಿತ್ತು. ನನಗೆ ನಿರಾಳವಾಗಿರಲು ಜೈಲಿನಲ್ಲಿ ಆಗಲೇ ಇಲ್ಲ’ ಎಂದರು.

‘ನನ್ನನ್ನು ನೇಣಿಗೇರಿಸಿದರೆ ಆಮ್‌ ಆದ್ಮಿ ಪಕ್ಷವನ್ನು ಮುಗಿಸಬಹುದು ಎಂದು ಯಾರಾದರೂ ಭಾವಿಸಿದರೆ ನನ್ನನ್ನು ನೇಣಿಗೇರಿಸಿ. ಎಎಪಿ ಒಂದು ಪಕ್ಷವಲ್ಲ, ಅದು ಒಂದು ಆಲೋಚನೆ. ಕೇಜ್ರಿವಾಲ್ ಸತ್ತರೆ ಇನ್ನೂ ನೂರಾರು ಕೇಜ್ರಿವಾಲ್‌ಗಳು ಹುಟ್ಟುತ್ತಾರೆ’ ಎಂದು ಹೇಳಿದರು.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಎಎಪಿ ಪಕ್ಷವನ್ನು ಆರೋಪಿಯನ್ನಾಗಿ ಇ.ಡಿ ಹೆಸರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸದ್ಯದಲ್ಲೇ ಎಲ್ಲ ವಿರೋಧ ಪಕ್ಷಗಳನ್ನು ವಿವಿಧ ಪ್ರಕರಣಗಳಲ್ಲಿ ಆರೋಪಿಗಳನ್ನಾಗಿ ಮಾಡಲಾಗುತ್ತದೆ. ಅಲ್ಲದೇ ಅವರ ಖಾತೆಗಳನ್ನು ನಿಷ್ಕ್ರಿಯಗಳಿಸಬಹುದು’ ಎಂದರು.

ದೆಹಲಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯಾಗಿರುವ ಬಗ್ಗೆ ಮಾತನಾಡಿದ ಅವರು, ‘ದೇಶವನ್ನು ಉಳಿಸಲು ನಮ್ಮ ಪಕ್ಷ ಏನೂ ಬೇಕಾದರೂ ಮಾಡುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT