ದೆಹಲಿ: ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ ಅವರನ್ನು 34 ಮತಗಳ ಅಂತರದಿಂದ ಮಣಿಸಿದ ಆಮ್ ಆದ್ಮಿ ಪಕ್ಷದ(ಎಎಪಿ) ಅಭ್ಯರ್ಥಿ ಶೆಲ್ಲಿ ಒಬೆರಾಯ್ ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಎಎಪಿಯ ಶೆಲ್ಲಿ ಒಬೆರಾಯ್ 150 ಮತಗಳನ್ನು ಪಡೆದರೆ, ಬಿಜೆಪಿಯ ಪರಾಜಿತ ಅಭ್ಯರ್ಥಿ ರೇಖಾ ಗುಪ್ತಾ 116 ಮತಗಳನ್ನು ಪಡೆದರು. ಒಟ್ಟು 266 ಮತಗಳು ಚಲಾವಣೆಯಾಗಿದ್ದವು.
ಮಹಾನಗರ ಪಾಲಿಕೆ ಚುನಾವಣೆ ನಡೆದ ಮೊದಲ ಸಭೆಯಲ್ಲೇ ಮೇಯರ್ ಆಯ್ಕೆಯಾಗಬೇಕೆಂಬ ನಿಯಮವಿದ್ದರೂ ಸಹ, ಕಳೆದ ಮೂರು ಭಾರಿ ಗಲಾಟೆ, ಗದ್ದಲ ಮತ್ತು ಚುನಾವಣಾ ಗೊಂದಲಗಳಿಂದಾಗಿ ಮೇಯರ್ ಆಯ್ಕೆ ನಡೆದಿರಲಿಲ್ಲ. 75 ದಿನಗಳ ಬಳಿಕ, ಇದೀಗ ಮೇಯರ್ ಆಯ್ಕೆ ನಡೆದಿದೆ.
ಫಲಿತಾಂಶ ಕುರಿತಂತೆ ಪ್ರತಿಕ್ರಿಯಿಸಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಗೂಂಡಾಗಳಿಗೆ ಸೋಲಾಗಿದೆ. ಜನರಿಗೆ ಗೆಲುವಾಗಿದೆ. ಶುಭಾಶಯಗಳು ಶೆಲ್ಲಿ ಒಬೆರಾಯ್ ಎಂದು ಹೇಳಿದ್ದಾರೆ.
ಮೇಯರ್ ಚುನಾವಣೆ ಶೀಘ್ರ ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಎಎಪಿಯ ಮೇಯರ್ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಎಂಸಿಡಿಯ ಮುಂದಿನ ಸಭೆಯಲ್ಲೇ ಮೇಯರ್ ಆಯ್ಕೆಗಾಗಿ ಚುನಾವಣೆ ನಡೆಸಬೇಕು ಮತ್ತು ಮೇಯರ್ ಆಯ್ಕೆ ನಡೆದ ಬಳಿಕ ಉಪಮೇಯರ್ ಆಯ್ಕೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ. ಪಾರ್ದಿವಾಲಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಫೆಬ್ರುವರಿ 17ರಂದು ನಿರ್ದೇಶನ ನೀಡಿತ್ತು.
ದೆಹಲಿ ಮಹಾನಗರ ಪಾಲಿಕೆಯ(ಎಂಸಿಡಿ) ನಾಮನಿರ್ದೇಶಿತ ಸದಸ್ಯರು ಮೇಯರ್ ಆಯ್ಕೆ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿತ್ತು.