ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ದನಿ ಅಲ್ಲ, ಮಾವೊ ನಂಟು ಸೆರೆಗೆ ಕಾರಣ

ಸಾಮಾಜಿಕ ಕಾರ್ಯಕರ್ತರ ಬಂಧನ: ‘ಸುಪ್ರೀಂ’ಗೆ ಮಹಾರಾಷ್ಟ್ರ ಪೊಲೀಸರ ಪ್ರಮಾಣಪತ್ರ
Last Updated 5 ಸೆಪ್ಟೆಂಬರ್ 2018, 18:38 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗೆ ಬಂಧಿಸಲಾದ ಐವರು ಸಾಮಾಜಿಕ ಕಾರ್ಯಕರ್ತರು ನಿಷೇಧಿತ ಸಿಪಿಐ (ಮಾವೊವಾದಿ) ಗುಂಪಿನ ಜತೆ ಸಂಪರ್ಕ ಹೊಂದಿರುವುದನ್ನು ದೃಢಪಡಿಸುವ ಸಾಕ್ಷ್ಯಗಳು ದೊರೆತಿವೆ. ಆ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆಯೇ ಹೊರತು ಭಿನ್ನ ನಿಲುವುಗಳನ್ನು ಹೊಂದಿದ್ದರು ಎಂಬುದಕ್ಕಲ್ಲ ಎಂದು ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.

ಇತಿಹಾಸಕಾರ್ತಿ ರೊಮಿಲಾ ಥಾಪರ್‌,ಅರ್ಥಶಾಸ್ತ್ರಜ್ಞರಾದ ಪ್ರಭಾತ್‌ ಪಟ್ನಾಯಕ್‌ ಮತ್ತು ದೇವಕಿ ಜೈನ್‌, ಸಮಾಜಶಾಸ್ತ್ರಜ್ಞ ಸತೀಶ್‌ ದೇಶಪಾಂಡೆ ಮತ್ತು ಕಾನೂನು ತಜ್ಞೆ ಮಾಜಾ ದಾರೂವಾಲಾ ಅವರು ಬಂಧನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿ ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ‍್ರಮಾಣಪತ್ರ ಸಲ್ಲಿಸಿದೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿಯೇ ಅವರನ್ನು ಬಂಧಿಸಲಾಗಿದೆ ಎಂಬುದನ್ನು ಅಲ್ಲಗಳೆಯುವ ಸಾಕ್ಷ್ಯಗಳು ಇವೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸಲು ಈ ಐವರಿಗೆ ಏನು ಹಕ್ಕಿದೆ ಎಂದು ಪ್ರಶ್ನಿಸಲಾಗಿದೆ.

ಮಹಾರಾಷ್ಟ್ರ ಪೊಲೀಸರು ದೇಶದ ವಿವಿಧ ಭಾಗಗಳಲ್ಲಿದ್ದ ಎಡಪಂಥೀಯ ಕಾರ್ಯಕರ್ತರ ಮನೆಗಳ ಮೇಲೆ ಆಗಸ್ಟ್‌ 28ರಂದು ರಾತ್ರಿ ದಾಳಿ ನಡೆಸಿ ಐವರನ್ನು ಬಂಧಿಸಿದ್ದರು. ಈ ಕಾರ್ಯಾಚರಣೆಯ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ತೆಲುಗು ಕವಿ ವರವರ ರಾವ್‌ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿತ್ತು. ವೆರ್ನನ್‌ ಗೊನ್ಸಾಲ್ವೆಸ್‌ ಮತ್ತು ಅರುಣ್‌ ಫೆರೆರಾ ಅವರನ್ನು ಮುಂಬೈ ಹಾಗೂ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತೆ ಸುಧಾ ಬಾರಧ್ವಜ್‌ ಅವರನ್ನು ಫರೀದಾಬಾದ್‌, ನಾಗರಿಕ ಹಕ್ಕುಗಳ ಕಾರ್ಯಕರ್ತ ಗೌತಮ್‌ ನವ್‌ಲಖಾ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಈ ಎಲ್ಲರನ್ನೂ ಇದೇ 6ರವರೆಗೆ (ಗುರುವಾರ) ಗೃಹ ಬಂಧನದಲ್ಲಿ ಇರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು.

ಈ ಎಲ್ಲರೂ ಭೀಮಾ–ಕೋರೆಗಾಂವ್‌ ಹಿಂಸಾಚಾರದ ಜತೆ ನಂಟು ಹೊಂದಿದ್ದಾರೆ. ದೇಶದಾದ್ಯಂತ ಹಿಂಸಾಚಾರ ನಡೆಸುವ ಮತ್ತು ಭದ್ರತಾ ಪಡೆಗಳ ಮೇಲೆ ಹೊಂಚು ದಾಳಿ ನಡೆಸುವ ಪಿತೂರಿ ನಡೆಸಿದ್ದಾರೆ ಎಂಬ ಆರೋಪವನ್ನು ಇವರ ಮೇಲೆ ಹೊರಿಸಲಾಗಿತ್ತು.

ಎಲ್ಗಾರ್‌ ಪರಿಷತ್‌ ಡಿಸೆಂಬರ್‌ 31ರಂದು ನಡೆಸಿದ್ದ ಕಾರ್ಯಕ್ರಮವು ಭೀಮಾ–ಕೋರೆಗಾಂವ್‌ ಗ್ರಾಮದಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು. ಇದರ ತನಿಖೆಯ ಭಾಗವಾಗಿ ಪೊಲೀಸರು ದಾಳಿಗಳನ್ನು ನಡೆಸಿದ್ದರು.

**

ನ್ಯಾಯಾಲಯ ನಿರ್ಧಾರ ಕೈಗೊಳ್ಳುವ ಮೊದಲೇ ಎಲ್ಲವನ್ನೂ ಬಹಿರಂಗಪಡಿಸಲಾಗುತ್ತದೆ. ನಗರ ನಕ್ಸಲರು, ಹಿಂದೂ ಉಗ್ರರು ಎಂಬ ಹಣೆಪಟ್ಟಿ ಕಟ್ಟುವ ಬದಲಿಗೆ ತಕ್ಷಣವೇ ಆರೋಪಪಟ್ಟಿ ಸಲ್ಲಿಸಿ.

–ಉದ್ಧವ್‌ ಠಾಕ್ರೆ,ಶಿವಸೇನಾ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT