ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಕಾಂತ್‌ ನಿಧನ: ಪ್ರಧಾನಿ ಮೋದಿ, ರಾಹುಲ್‌, ಸ್ಟಾಲಿನ್‌ ಸೇರಿ ಗಣ್ಯರ ಸಂತಾಪ

Published 28 ಡಿಸೆಂಬರ್ 2023, 6:59 IST
Last Updated 28 ಡಿಸೆಂಬರ್ 2023, 6:59 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ನಟ ಹಾಗೂ ರಾಜಕಾರಣಿ ‘ಕ್ಯಾಪ್ಟನ್‌‘ ವಿಜಯಕಾಂತ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಸಿನಿಮಾ ಹಾಗೂ ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದ ವಿಜಯಕಾಂತ್‌ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 2005ರಲ್ಲಿ ಡಿಎಂಡಿಕೆ ಪಕ್ಷ ಸ್ಥಾಪನೆ ಮಾಡಿದರು. 2011ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಡಿಕೆ ಪಕ್ಷ 29 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಮುಖ ವಿರೋಧ ಪಕ್ಷವಾಗಿತ್ತು. ಈ ಅವಧಿಯಲ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. 

ವಿಜಯಕಾಂತ್‌ ನಿಧನ ನನಗೆ ನೋವು ತಂದಿದೆ. ತಮಿಳು ಸಿನಿಮಾರಂಗದ ದಂತಕಥೆಯಾಗಿದ್ದ ವಿಜಯಕಾಂತ್‌ ವರ್ಚಸ್ಸು ಲಕ್ಷಾಂತರ ಜನರ ಹೃದಯಗೆದ್ದಿತ್ತು. ಅವರು ನನ್ನ ಆಪ್ತರಾಗಿದ್ದರು. ಪ್ರೀತಿಯಿಂದ ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದು ಮೋದಿ ಸಂತಾಪ ಸೂಚಿಸಿದ್ದಾರೆ. 

ಡಿಎಂಡಿಕೆ ಸ್ಥಾಪಕ ಮತ್ತು ಅಧ್ಯಕ್ಷ ಕ್ಯಾಪ್ಟನ್ ವಿಜಯಕಾಂತ್ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಎಂದು ಸಂತಾಪ ಸೂಚಿಸಿದ್ದಾರೆ. ತಮಿಳುನಾಡಿನ ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆಯನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುತ್ತದೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಡಿಎಂಡಿಕೆ ಸ್ಥಾಪಕ ವಿಜಯಕಾಂತ್ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಸಿನಿಮಾ ಮತ್ತು ರಾಜಕೀಯಕ್ಕೆ ಅವರು ನೀಡಿದ ಕೊಡುಗೆಗಳು ಲಕ್ಷಾಂತರ ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರಾಹುಲ್‌ ಗಾಂಧಿ ಪ್ರಾರ್ಥಿಸಿದ್ದಾರೆ. 

ನನ್ನ ಆತ್ಮೀಯ ಸ್ನೇಹಿತ, ಡಿಎಂಡಿಕೆ ಸ್ಥಾಪಕ ಅಧ್ಯಕ್ಷ ಕ್ಯಾಪ್ಟನ್ ವಿಜಯಕಾಂತ್ ಅವರಿಗೆ ನಾನು ಅಂತಿಮ ನಮನ ಸಲ್ಲಿಸಿದ್ದೇನೆ. ವಿಜಯಕಾಂತ್‌ ಸಿನಿಮಾ ಹಾಗೂ ರಾಜಕೀಯ ಜೀವನದಲ್ಲಿ ಯಶಸ್ವಿಯಾದ ವ್ಯಕ್ತಿ. ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಮತ್ತು  ಪಕ್ಷದ ಕಾರ್ಯಕರ್ತರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ತಮ್ಮ ಸಂತಾಪ ಸೂಚಕ ಪತ್ರದಲ್ಲಿ ತಿಳಿಸಿದ್ದಾರೆ.

ನಟ, ವಿರೋಧ ಪಕ್ಷದ ಮಾಜಿ ನಾಯಕ ವಿಜಯಕಾಂತ್ ಅನಾರೋಗ್ಯದಿಂದ ನಿಧನರಾದ ಸುದ್ದಿ ತಿಳಿದು ನನಗೆ ತೀವ್ರ ದುಃಖವಾಗಿದೆ. ರಾಜಕೀಯ ಹಾಗೂ ಕಲಾ ಕ್ಷೇತ್ರದಲ್ಲಿ ಕ್ಯಾಪ್ಟನ್‌ ಎಂದೇ ಖ್ಯಾತರಾಗಿದ್ದ ವಿಜಯಕಾಂತ್‌ ಅವರ ಆತ್ಮವು ಭಗವಂತನ ಪಾದಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯಲಿ ಎಂದು ಎಐಎಡಿಎಂಕೆ ನಾಯಕ ಪಳನಿ ಸ್ವಾಮಿ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT