ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹುವಾ ಉಚ್ಚಾಟನೆ ಶಿಫಾರಸು ಮರುಪರಿಶೀಲನೆಗೆ ಮನವಿ: ಸ್ಪೀಕರ್‌ಗೆ ರಂಜನ್‌ ಪತ್ರ

Published 2 ಡಿಸೆಂಬರ್ 2023, 15:49 IST
Last Updated 2 ಡಿಸೆಂಬರ್ 2023, 15:49 IST
ಅಕ್ಷರ ಗಾತ್ರ

ನವದೆಹಲಿ: ‘ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ಲೋಕಸಭೆಯ ನೀತಿ ಸಮಿತಿ ಮಾಡಿರುವ ಶಿಫಾರಸು ಗಂಭೀರ ಸ್ವರೂಪದ ಶಿಕ್ಷೆಯಾಗಿದ್ದು, ಇದು ತೀವ್ರಸ್ವರೂಪದ ಸಂಕೀರ್ಣವಾದ ಪರಿಣಾಮವನ್ನು ಬೀರಲಿದೆ’ ಎಂದು ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಹೇಳಿದ್ದಾರೆ.

ಪ್ರಶ್ನೆ ಕೇಳಲು ಲಂಚ ಪಡೆದ ‍ಪ್ರಕರಣಕ್ಕೆ ಸಂಬಂಧಿಸಿ ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಬೇಕು ಎಂದು ನೀತಿ ಸಮಿತಿಯು ಶಿಫಾರಸು ಮಾಡಿದೆ. ಈ ಶಿಫಾರಸನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.

ಶಿಫಾರಸಿಗೆ ಸಂಬಂಧಿಸಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ನಾಲ್ಕು ಪುಟಗಳ ಪತ್ರ ಬರೆದಿರುವ ಚೌಧರಿ, ಸಂಸದೀಯ ಸಮಿತಿಗಳ ನೀತಿ ಮತ್ತು ಪ್ರಕ್ರಿಯೆಗಳ ಕುರಿತು ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ.

‘ಹಕ್ಕುಬಾಧ್ಯತಾ ಸಮಿತಿ ಮತ್ತು ನೀತಿ ಸಮಿತಿಯ ಕರ್ತವ್ಯವ್ಯಾಪ್ತಿ ಕುರಿತು ಸ್ಪಷ್ಟಪಡಿಸಲಾಗಿಲ್ಲ. ಜೊತೆಗೆ, ಅನೈತಿಕ ನಡವಳಿಕೆ ಮತ್ತು ನಡವಳಿಕೆ ಸಂಹಿತೆ ಕುರಿತು ಇನ್ನೂ ನಿಯಮಗಳನ್ನು ರೂಪಿಸಲಾಗಿಲ್ಲ. ಹೀಗಾಗಿ, ಲೋಕಸಭಾ ಸದಸ್ಯರ ಹಕ್ಕುಗಳು ಮತ್ತು ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮಹುವಾ ಅವರ ವಿರುದ್ಧ ಮಾಡಿರುವ ಶಿಫಾರಸನ್ನು ಮರುಪರಿಶೀಲಿಸಬೇಕು’ ಎಂದು ಕೋರಿದ್ದಾರೆ.

ಮಾಧ್ಯಮಗಳು ವರದಿ ಮಾಡಿರುವಂತೆ ಮಹುವಾ ಅವರನ್ನು ಉಚ್ಚಾಟಿಸಲು ನೀತಿ ಸಮಿತಿಯು ಶಿಫಾರಸು ನೀಡಿದೆ ಎಂಬುದು ನಿಜವೇ ಆದರೆ, ಇಂಥದ್ದೊಂದು ಶಿಫಾರಸನ್ನು ಇದೇ ಮೊದಲ ಬಾರಿಗೆ ನೀತಿ ಸಮಿತಿ ಮಾಡಿದಂತಾಗುತ್ತದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘ನಿಮ್ಮ ನಾಯಕತ್ವದಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ ಮತ್ತು ಸಂಸತ್‌ ಪ್ರಕ್ರಿಯೆಯು ಸರಾಗವಾಗಿ ನಡೆಯುವಂತೆ ಮಾಡುತ್ತೀರ ಎಂದು ನಂಬಿದ್ದೇನೆ’ ಎಂದು ಸ್ಪೀಕರ್‌ ಅವರನ್ನು ಉದ್ದೇಶಿಸಿ ಚೌಧರಿ ಹೇಳಿದ್ದಾರೆ.

‘ಕೇಂದ್ರದ ಸಂಚು’: ಪತ್ರ ಬರೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೌಧರಿ ಅವರು, ‘ಸಂಸದರೊಬ್ಬರನ್ನು ಅವಮಾನಿಸುತ್ತಿರುವ ರೀತಿಯು ಸ್ವೀಕೃತವಲ್ಲ ಎಂದು ತಿಳಿಸಲು ನಾನು ಸ್ಪೀಕರ್‌ ಅವರಿಗೆ ಪತ್ರ ಬರೆದೆ. ನೀತಿ ಸಮಿತಿಯು ಅನೈತಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಗೌಪ್ಯವಾಗಿರಬೇಕಿದ್ದ ನೀತಿ ಸಮಿತಿಯ ಚರ್ಚೆಗಳು ಬಹಿರಂಗವಾಗಿದ್ದು ಹೇಗೆ’ ಎಂದು ಪ್ರಶ್ನಿಸಿದ್ದಾರೆ.

ಮಹುವಾ ಬೆಂಬಲಿಸಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ಮಹುವಾ ಅವರು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಕಾರಣ ಅವರನ್ನು ಉಚ್ಚಾಟಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್‌ 4ರಿಂದ ಡಿಸೆಂಬರ್‌ 22ರ ವರೆಗೆ ನಡೆಯಲಿದೆ. ಅಧಿವೇಶನದ ಮೊದಲ ದಿನವೇ ಮಹುವಾ ವಿರುದ್ಧದ ಶಿಫಾರಸು ಮಂಡನೆಯಾಗಲಿದೆ.

ಸಹಕಾರ ಕೋರಿದ ಕೇಂದ್ರ

ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಲು ನೀಡಲಾಗಿರುವ ಶಿಫಾರಸು, ಕ್ರಿಮಿನಲ್‌ ಕಾನೂನುಗಳಿಗೆ ಪರ್ಯಾಯವಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಮೂರು ಹೊಸ ಮಸೂದೆಗಳು, ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಗಳ ವಿಚಾರವು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಗೊಳಗಾಗುವ ವಿಚಾರಗಳಾಗಿವೆ.

ಅಧಿವೇಶನವು ಸರಾಗವಾಗಿ ನಡೆಯುಂತೆ ಮಾಡಲು ಸಹಕಾರ ನೀಡಬೇಕೆಂದು ಕೇಂದ್ರ ಸರ್ಕಾರವು ವಿರೋಧಪಕ್ಷಗಳಿಗೆ ಕೇಳಿಕೊಂಡಿದೆ.

ಟೀಕೆ ಕೈಬಿಡಲು ಡ್ಯಾನಿಶ್‌ ಮನವಿ

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸುವಂತೆ ನೀತಿ ಸಮಿತಿ ಮಾಡಿರುವ ಶಿಫಾರಸಿನಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಟೀಕೆಗಳನ್ನು ಕೈಬಿಡುವಂತೆ ಬಿಎಸ್‌ಪಿ ಸಂಸದ ಡ್ಯಾನಿಶ್‌ ಅಲಿ ಅವರು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ನೀತಿ ಸಮಿತಿ ಅಧ್ಯಕ್ಷ ವಿನೋದ್‌ ಸಂಕಾರ್‌ ಅವರ ನೇತೃತ್ವದಲ್ಲಿ ನವೆಂಬರ್‌ 2ರಂದು ನಡೆದ ಸಭೆಯಲ್ಲಿ, ಸಮಿತಿ ಮುಂದಿಟ್ಟ ಪ್ರಶ್ನೆಗಳ ಉದ್ದೇಶವನ್ನು ತಿರುಚಲು ಡ್ಯಾನಿಶ್‌ ಅಲಿ ಪ್ರಯತ್ನಿಸಿದ್ದರು. ಅದಕ್ಕಾಗಿ ಅವರಿಗೆ ವಾಗ್ದಂಡನೆ ವಿಧಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ಇದನ್ನು ಅಲಿ ಆಕ್ಷೇಪಿಸಿದ್ದಾರೆ. ನೀತಿ ಸಂಹಿತೆಯ 15 ಸದಸ್ಯರಲ್ಲಿ ಅಲಿ ಕೂಡಾ ಒಬ್ಬರು. ಪ್ರಶ್ನೆ ಕೇಳಲು ಹಣ ಪಡೆದ ಪ್ರಕರಣದಲ್ಲಿ ಮಹುವಾ ಅವರನ್ನು ಉಚ್ಚಾಟಿಸಬೇಕು ಎಂಬ ಕ್ರಮಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು.

‘ನೀತಿ ಸಂಹಿತೆಯ ವರದಿಯು ಕೆಲವು ಆಘಾತಕಾರಿ ಮತ್ತು ಸಂಪೂರ್ಣವಾಗಿ ನಿರಾಧಾರ ಸಂಗತಿಗಳನ್ನು ಹೊಂದಿದೆ’ ಎಂದು ಅವರು ಲಿಖಿತ ರೂಪದಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT