ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಅಸ್ಸಾಂನ ’ಅಹೋಂ ಮೊಯ್ದಂ’ ಸೇರ್ಪಡೆಗೆ ಶಿಫಾರಸು

Published 4 ಜುಲೈ 2024, 15:28 IST
Last Updated 4 ಜುಲೈ 2024, 15:28 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನ ಚರೈದಿಯೊ ಜಿಲ್ಲೆಯಲ್ಲಿರುವ ‘ಅಹೋಂ’ ರಾಜಮನೆತನದ ಕುಟುಂಬ ಸದಸ್ಯರ ಚಿರಶಾಂತಿ ತಾಣ ‘ಮೊಯ್ದಂ’ ಅನ್ನು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಬೇಕು ಎಂದು ಅಂತರರಾಷ್ಟ್ರೀಯ ಸಲಹಾ ಸಂಸ್ಥೆ ಐಸಿಒಎಂಒಎಸ್‌ ಶಿಫಾರಸು ಮಾಡಿದೆ.

ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಮಂಡಳಿ (ಐಸಿಒಎಂಒಎಸ್‌) ಸದ್ಯ, ವಿಶ್ವ ಪಾರಂಪರಿಕ ಸಮಿತಿಯ 46ನೇ ಸಾಮಾನ್ಯ ಸಭೆಯಲ್ಲಿ ಪಟ್ಟಿಯನ್ನು ಸಿದ್ಧಪಡಿಸಿದೆ. ಈ ಸಭೆಯು ನವದೆಹಲಿಯಲ್ಲಿ ಜುಲೈ 21–31ರವರೆಗೆ ನಡೆಯಲಿದೆ. 

ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಮಾಹಿತಿ ಅನುಸಾ, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಒಟ್ಟಾರೆ 36 ನಾಮನಿರ್ದೇಶನಗಳು ಬಂದಿವೆ. ಇವುಗಳಲ್ಲಿ 19 ಹೊಸದಾಗಿದ್ದು, ‘ಅಹೋಂ ಮೊಯ್ದಂ’ ಭಾರತದ ಏಕಮಾತ್ರ ನಾಮನಿರ್ದೇಶನವಾಗಿದೆ.

ಭಾರತದಲ್ಲಿರುವ ಅಹೋಂ ರಾಜಮನೆತನದವರ ದಿಬ್ಬ ಸ್ವರೂಪದ ಸಮಾಧಿಯಾಗಿರುವ ‘ಮೊಯ್ದಂ’ ಅನ್ನು ನಿಯಮಾವಳಿ 3 ಮತ್ತು 4ರ ಅನ್ವಯ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಅಸ್ಸಾಂನ ಬ್ರಹ್ಮಪುತ್ರ ಕಣಿವೆ ವ್ಯಾಪ್ತಿಯಲ್ಲಿ ಸುಮಾರು 319 ಮೊಯ್ದಂಗಳು ಇವೆ ಎಂದು ಗುರುತಿಸಲಾಗಿದೆ. ಈಗ ಅಸ್ಸಾಂ ಎಂದು ಗುರುತಿಸಲಾಗುವ ಪ್ರದೇಶಕ್ಕೆ ತಾಯ್ ಅಹೋಂ 13ನೇ ಶತಮಾನದಲ್ಲಿ ವಲಸೆ ಬಂದಿದ್ದರು. ಚರೈದಿಯೊ ಅನ್ನು ತಮ್ಮ ಪ್ರಥಮ ರಾಜಧಾನಿಯಾಗಿ ಗುರುತಿಸಿಕೊಂಡಿದ್ದರು. 19ನೇ ಶತಮಾನದವರೆಗೂ ಸುಮಾರು 600 ವರ್ಷಗಳ ಅವಧಿಯಲ್ಲಿ ಈ ರಾಜಮನೆತನದವರ ಸಮಾಧಿಗಳನ್ನು ಭಿನ್ನವಾಗಿ ರೂಪಿಸಲಾಗಿತ್ತು. ಪ್ರಕೃತಿ ಸಹಜವಾಗಿ ಬೆಟ್ಟ, ಅರಣ್ಯ, ನೀರಿನ ಲಭ್ಯತೆ ಇರುವಂತೆ ದಿಬ್ಬ ಸ್ವರೂಪದ ಸಮಾಧಿಗಳನ್ನು ರೂಪಿಸಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.  ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮತ್ತು ಅಸ್ಸಾಂ ಸರ್ಕಾರದ ಪ್ರಾಚ್ಯವಸ್ತು ಇಲಾಖೆಯು ಜಂಟಿಯಾಗಿ ಈ ತಾಣಗಳನ್ನು ನಿರ್ವಹಣೆ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT