ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಡಿ ಕಿಸಾನ್‌ ವಾಹಿನಿಯಲ್ಲಿ ಎ.ಐ ನಿರೂಪಕರ ಸದ್ದು

Published 24 ಮೇ 2024, 11:17 IST
Last Updated 24 ಮೇ 2024, 11:17 IST
ಅಕ್ಷರ ಗಾತ್ರ

ನವದೆಹಲಿ: ಅನ್ನದಾತರಿಗೆ ಮೀಸಲಾದ ದೂರದರ್ಶನದ ಕಿಸಾನ್‌ ವಾಹಿನಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಇಬ್ಬರು ಎ.ಐ ಸುದ್ದಿ ನಿರೂಪಕರ ಪರಿಚಯಕ್ಕೆ ಕೇಂದ್ರ ಕೃಷಿ ಸಚಿವಾಲಯ ಮುಂದಾಗಿದೆ.

ಎ.ಐ ಕ್ರಿಶ್‌ ಹಾಗೂ ಎ.ಐ ಭೂಮಿ ಹೆಸರಿನ ಈ ಕೃತಕ ಸುದ್ದಿ ವಾಚಕರು ಭಾರತ ಹಾಗೂ ವಿದೇಶಿ ಸೇರಿದಂತೆ 50 ಭಾಷೆಗಳಲ್ಲಿ ಸುದ್ದಿ ಓದಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಶನಿವಾರದಿಂದಲೇ ಕೃಷಿಗೆ ಸಂಬಂಧಿಸಿದ ಸುದ್ದಿಗಳನ್ನು ವಾಚಿಸಲಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ.

ರೈತರಿಗೆ ಮೀಸಲಾದ ದೇಶದ ಮೊದಲ ಸರ್ಕಾರಿ ವಾಹಿನಿ ಇದಾಗಿದೆ. ಗ್ರಾಮೀಣ ಭಾಗದ ಕೃಷಿಕರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ 2015ರಲ್ಲಿ ಈ ವಾಹಿನಿಯನ್ನು ಆರಂಭಿಸಲಾಗಿದೆ.

ಒಂಬತ್ತನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ವಾಹಿನಿಗೆ ಹೊಸ ಸ್ವರೂಪ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರೈತಾಪಿ ವರ್ಗಕ್ಕೆ ಮತ್ತಷ್ಟು ಉಪಯುಕ್ತವಾದ ಮಾಹಿತಿ ನೀಡುವ ಉದ್ದೇಶದಿಂದ ಪ್ರಸಾರ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅನುಷ್ಠಾನಕ್ಕೆ ಮುಂದಾಗಿದೆ ಎಂದು ಸಚಿವಾಲಯ ತಿಳಿಸಿದೆ. 

ವಿರಾಮ ಇಲ್ಲದೆಯೇ ಈ ಸುದ್ದಿ ನಿರೂಪಕರು ದಿನದ 24 ಗಂಟೆ ಕಾಲ ಸುದ್ದಿ ಓದುವ ಸಾಮರ್ಥ್ಯ ಹೊಂದಿದ್ದಾರೆ. ಕೃಷಿ ಸಂಶೋಧನೆ, ಮಾರುಕಟ್ಟೆಯ ಬೆಲೆ, ಹವಾಮಾನ ಮುನ್ಸೂಚನೆ, ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ಆಯಾ ಕ್ಷಣದ ತಾಜಾ ಮಾಹಿತಿಗಳನ್ನು ನೀಡಲಿದ್ದಾರೆ ಎಂದು ಹೇಳಿದೆ. 

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಲಿದ್ದಾರೆ ಎಂದು ತಿಳಿಸಿದೆ.

ವಾರ್ತಾ ಮತ್ತು ಪ್ರಸಾರ ವಿಭಾಗದಲ್ಲಿ ಎ.ಐ ನಿರೂಪಕರನ್ನು ಪರಿಚಯಿಸುವ ಮೂಲಕ ಸರ್ಕಾರವು ಹೊಸ ಹೆಜ್ಜೆ ಇದೆ. ಆದರೆ, ಸಮೂಹ ಸಂವಹನ ವಿಭಾಗದಲ್ಲಿ ಎ.ಐ ತಂತ್ರಜ್ಞಾನ ಬಳಕೆಯ ಅಗತ್ಯತೆ ಕುರಿತಂತೆ ಹಲವರು ಆಕ್ಷೇಪದ ಧ್ವನಿ ಎತ್ತಿದ್ದಾರೆ. ಬಳಕೆದಾರರು ಮತ್ತು ವೀಕ್ಷಕರು ಯಾವ ರೀತಿ ಇದನ್ನು ಸ್ವೀಕರಿಸುತ್ತಾರೆ ಎಂಬುದರ ಮೇಲೆ ದೂರದರ್ಶನದಲ್ಲಿ ಈ ತಂತ್ರಜ್ಞಾನದ ಬಳಕೆಯ ಯಶಸ್ಸು ನಿಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT