ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಲಲಿತಾ ಕುರಿತ ಅಣ್ಣಾಮಲೈ ಹೇಳಿಕೆ ಬೇಜವಾಬ್ದಾರಿಯುತ, ಅಪ್ರಬುದ್ಧ: ಪಳನಿಸ್ವಾಮಿ ಕಿಡಿ

Published 13 ಜೂನ್ 2023, 12:56 IST
Last Updated 13 ಜೂನ್ 2023, 12:56 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯಿಂದ ಕೆಂಡಾಮಂಡಲವಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಪಳನಿಸ್ವಾಮಿ, ಇದು ‘ಬೇಜವಾಬ್ದಾರಿಯುತ ಮತ್ತು ಅಪ್ರಬುದ್ಧ’ ಎಂದು ತಿರುಗೇಟು ನೀಡಿದ್ದಾರೆ.

‘ಯಾವುದೋ ಉದ್ದೇಶದಿಂದ ಅಣ್ಣಾಮಲೈ ಅವರು ಜಯಲಲಿತಾ ವಿರುದ್ಧ ದೋಷಾರೋಪ ಮಾಡಿದ್ದಾರೆ. ಅವರ ಹೇಳಿಕೆಯಲ್ಲಿ ರಾಜಕೀಯ ಅನುಭವದ ಕೊರತೆ ಎದ್ದು ಕಾಣುತ್ತಿದೆ. ನಾವು ಇದನ್ನು ಬಲವಾಗಿ ಖಂಡಿಸುತ್ತೇವೆ. ಕ್ರಾಂತಿಕಾರಿ ನಾಯಕಿ ಜಯಲಲಿತಾ ಅವರ ಘನತೆಗೆ ಕುಂದುಂಟುಮಾಡಿದ ಅಣ್ಣಾಮಲೈ ವಿರುದ್ಧ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳು ನಿರ್ಣಯವೊಂದನ್ನು ಅಂಗೀಕರಿಸಿದ್ದಾರೆ’ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ಎಐಎಡಿಎಂಕೆ ಅಣ್ಣಾಮಲೈ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದು, ಪಳನಿಸ್ವಾಮಿ ಅವರು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು.

ಸಭೆಯಲ್ಲಿ, ಕಾರ್ಯಕರ್ತರು ಮತ್ತು ಸಾರ್ವಜನಿಕರು ಅಣ್ಣಾಮಲೈ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಎ.ಬಿ.ವಾಜಪೇಯಿ, ಎಲ್‌.ಕೆ.ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಜಯಲಲಿತಾ ಅವರ ಬಗ್ಗೆ ಗೌರವ ಮತ್ತು ಅಭಿಮಾನ ಹೊಂದಿದ್ದಾರೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಈ ಮಧ್ಯೆ, ಅಣ್ಣಾಮಲೈ ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ ಬಿಜೆಪಿಯೊಂದಿಗಿನ ಮೈತ್ರಿ ಕುರಿತು ಮರುಚಿಂತನೆ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಡಿ.ಜಯಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಅಣ್ಣಾಮಲೈ ಹೇಳಿದ್ದೇನು: ‘ತಮಿಳುನಾಡಿನ ಆಡಳಿತವು ಭ್ರಷ್ಟವಾಗಿದೆ. ಮಾಜಿ ಮುಖ್ಯಮಂತ್ರಿ ಸಹ ದೋಷಿಯಾಗಿದ್ದರು. ಹಾಗಾಗಿ ತಮಿಳುನಾಡು ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಒಂದಾಗಿದೆ. ದೇಶದ ಮೊದಲ ಭ್ರಷ್ಟ ರಾಜ್ಯ’ ಎಂದು ಅಣ್ಣಾಮಲೈ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT