ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸಿಎಂ ಶಿಂದೆ ಅಯೋಧ್ಯೆ ಭೇಟಿಗೆ ಪ್ರಚಾರ; ಗೇಲಿ ಮಾಡಿದ ಎನ್‌ಸಿಪಿ ನಾಯಕ

Last Updated 8 ಏಪ್ರಿಲ್ 2023, 10:00 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ ಅವರ ಅಯೋಧ್ಯೆ ಭೇಟಿ ಬಗ್ಗೆ ವ್ಯಾಪಕ ಪ್ರಚಾರ ನೀಡುತ್ತಿರುವುದು ಹಾಗೂ ನಂತರದ ಕಾರ್ಯಕ್ರಮಗಳ ಕುರಿತು ಮಾಧ್ಯಮಗಳು ನಿರಂತರವಾಗಿ ಸುದ್ದಿ ಪ್ರಸಾರ ಮಾಡುತ್ತಿರುವುದನ್ನು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್‌ ಪವಾರ್‌ ಗೇಲಿ ಮಾಡಿದ್ದಾರೆ.

ಉತ್ತರ ಪ್ರದೇಶದ ಲಖನೌಗೆ ಶನಿವಾರ ಸಂಜೆ ಆಗಮಿಸುವ ಶಿಂದೆ, ಭಾನುವಾರ ಬೆಳಗ್ಗೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಹನುಮ ಮತ್ತು ರಾಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ರಾಮ ಜನ್ಮಭೂಮಿ ದೇವಾಲಯದ ನಿರ್ಮಾಣ ಕಾರ್ಯದ ವೀಕ್ಷಣೆ ನಡೆಸಲಿದ್ದಾರೆ. ಸಂಜೆ ಸರಯು ನದಿ ದಂಡೆಯಲ್ಲಿ 'ಆರತಿ' ಪೂಜೆ ನೆರವೇರಿಸಿ, ಶ್ರೀಗಳನ್ನು ಭೇಟಿ ಮಾಡಲಿದ್ದಾರೆ. ನಂತರ ಮಾಧ್ಯಮಗೋಷ್ಟಿ ನಡೆಸಿ, ಮುಂಬೈಗೆ ವಾಪಸ್‌ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿಂದೆ ಭೇಟಿಯ ಬಗ್ಗೆ ಮಾತನಾಡಿರುವ ಅಜಿತ್‌, 'ನಾನು ಎಲ್ಲಿಯಾದರೂ ಪ್ರಾರ್ಥನೆ ಸಲ್ಲಿಸುವಾಗ, ಈ ರೀತಿ ಪ್ರಚಾರ ಮಾಡುವುದಿಲ್ಲ. ಮುಖ್ಯಮಂತ್ರಿಯವರು ಆಶೀರ್ವಾದ ಪಡೆಯುವುದಕ್ಕಾಗಿ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಹೀಗಿರುವಾಗ, ಅವರು ಬರುತ್ತಿದ್ದಾರೆ, ವಿಮಾನ ನಿಲ್ದಾಣದಲ್ಲಿದ್ದಾರೆ, ಅವರ ವಿಮಾನ ಟೇಕ್‌ಆಫ್‌ ಆಯಿತು ಎಂಬಿತ್ಯಾದಿ ಅಪ್‌ಡೇಟ್‌ ನೀಡುವ ಅಗತ್ಯವಿಲ್ಲ' ಎಂದು ಕುಟುಕಿದ್ದಾರೆ.

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಪವಾರ್‌, ನಿರುದ್ಯೋಗ, ಅಪರಾಧ, ರೈತರ ಸಂಕಷ್ಟಗಳತ್ತ ಒತ್ತು ನೀಡುವ ಅಗತ್ಯವಿದೆ ಎಂದಿದ್ದಾರೆ.

ಬಿಜೆಪಿ ಸಂಸದ ಗಿರೀಶ್‌ ಬಾಪತ್‌ ನಿಧನದ ಹಿನ್ನೆಲೆಯಲ್ಲಿ ಪುಣೆ ಲೋಕಸಭೆ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆ ಕುರಿತು ಮಾತನಾಡಿರುವ ಅಜಿತ್‌, ಚುನಾವಣಾ ಆಯೋಗವು ದಿನಾಂಕ ಘೋಷಿಸಿದ ಬಳಿಕ ಪಕ್ಷವು ಅಭ್ಯರ್ಥಿ ಹೆಸರು ಘೋಷಿಸಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT