ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಟರ್ನ್ಸ್‌ ಸಲ್ಲಿಕೆ ಏರಿದರೂ ತೆರಿಗೆ ಪಾವತಿಯಲ್ಲಿ ಇಲ್ಲ ಏರಿಕೆ

ಗುರಿ ತಲುಪದ ಕರ ಸಂಗ್ರಹ
Last Updated 9 ಸೆಪ್ಟೆಂಬರ್ 2018, 15:31 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ತೆರಿಗೆ ಸಂಗ್ರಹದ ಪ್ರಮಾಣ ನಿರೀಕ್ಷೆಗಿಂತ ಬಹಳ ಕಡಿಮೆ ಇದೆ. ಹೆಚ್ಚು ಆದಾಯದ ಅಗತ್ಯ ಇರುವ ಚುನಾವಣಾ ವರ್ಷದಲ್ಲಿ ತೆರಿಗೆ ಸಂಗ್ರಹ ಕಡಿಮೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.

2018–19ನೇ ಆರ್ಥಿಕ ವರ್ಷದಲ್ಲಿ ₹14.80 ಲಕ್ಷ ಕೋಟಿ ತೆರಿಗೆ ಸಂಗ್ರಹದ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಜುಲೈಗೆ ಕೊನೆಯಾದ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ₹2.92 ಲಕ್ಷ ಕೋಟಿ ಮಾತ್ರ ಸಂಗ್ರಹ ಆಗಿದೆ ಎಂದು ಲೆಕ್ಕಪತ್ರ ನಿಯಂತ್ರಕರ ಕಚೇರಿಯ ದತ್ತಾಂಶ ತಿಳಿಸಿದೆ.

ಇದು ಒಟ್ಟು ಗುರಿಯ ಶೇ 19.8ರಷ್ಟು ಮಾತ್ರ. ಕಳೆದ ಆರ್ಥಿಕ ವರ್ಷದಲ್ಲಿ ಈ ಅವಧಿಯಲ್ಲಿ ಒಟ್ಟು ಗುರಿಯ ಶೇ 21ರಷ್ಟು ತೆರಿಗೆ ಸಂಗ್ರಹ ಆಗಿತ್ತು. ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಭಾರಿ ಏರಿಕೆ ಆಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಹಾಗಿದ್ದರೂ ಒಟ್ಟು ತೆರಿಗೆ ಸಂಗ್ರಹದಲ್ಲಿ ಏರಿಕೆ ಆಗಿಲ್ಲ.

‘ಹಿಂದಿನ ವರ್ಷಕ್ಕೆ ಹೋಲಿಸಿದರೆ 2018–19ನೇ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಅಂತರ್ಜಾಲ ಮೂಲಕ ರಿಟರ್ನ್ಸ್‌ ಸಲ್ಲಿಕೆ ಕಳೆದ ವರ್ಷದ ಆಗಸ್ಟ್‌ 31ಕ್ಕೆ 3.17 ಕೋಟಿ ಇದ್ದರೆ ಈ ವರ್ಷ ಅದು 5.42 ಕೋಟಿಗೆ ಏರಿದೆ. ಒಟ್ಟು ಶೇ 70.86ರಷ್ಟು ಹೆಚ್ಚಳವಾಗಿದೆ. ರಿಟರ್ನ್ಸ್‌ ಸಲ್ಲಿಕೆಯ ಕೊನೆಯ ದಿನವಾದಆಗಸ್ಟ್‌ 31ರಂದು 34.95 ಲಕ್ಷ ರಿಟರ್ನ್ಸ್‌ ಸಲ್ಲಿಕೆ ಆಗಿದೆ’ ಎಂದು ಸರ್ಕಾರ ಹೇಳಿದೆ.

ಆದರೆ, ಹೆಚ್ಚು ಜನರು ರಿಟರ್ನ್ಸ್‌ ಸಲ್ಲಿಸಿದ್ದಾರೆ ಎಂದರೆ ಹೆಚ್ಚು ತೆರಿಗೆ ಪಾವತಿ ಆಗಿದೆ ಎಂದು ಅರ್ಥವಲ್ಲ. ತಮಗೆ ತೆರಿಗೆ ಪಾವತಿಸುವಷ್ಟು ಆದಾಯ ಇಲ್ಲ ಎಂದು ಹೆಚ್ಚು ಹೆಚ್ಚು ಜನರು ಹೇಳಿದ್ದಾರೆ. ಗಡುವಿನೊಳಗೆ ರಿಟರ್ನ್ಸ್‌ ಸಲ್ಲಿಸದಿದ್ದರೆ ಭಾರಿ ದಂಡ ಕಟ್ಟಬೇಕಾಗುತ್ತದೆ ಎಂಬ ಎಚ್ಚರಿಕೆಯ ಕಾರಣಕ್ಕೆ ಹೆಚ್ಚು ಜನರು ಲೆಕ್ಕಪತ್ರ ಸಲ್ಲಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್‌ಟಿ ಸಂಗ್ರಹ ಕೂಡ ಬಜೆಟ್‌ ಗುರಿಯನ್ನು ತಲುಪಿಲ್ಲ. ಪ್ರತಿ ತಿಂಗಳು ಜಿಎಸ್‌ಟಿ ಸಂಗ್ರಹ ₹1 ಲಕ್ಷ ಕೋಟಿ ಮೀರಬೇಕು ಎಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿತ್ತು. ಏಪ್ರಿಲ್‌ ತಿಂಗಳು ಬಿಟ್ಟರೆ ಬೇರೆ ಯಾವ ತಿಂಗಳಲ್ಲಿಯೂ ಇದು ಒಂದು ಲಕ್ಷ ಕೋಟಿ ರೂಪಾಯಿಯನ್ನು ದಾಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT