ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್ ಬಂಧನ: ಇ.ಡಿಗೆ ಸುಪ್ರೀಂ ಕೋರ್ಟ್‌ ನೋಟಿಸ್

Published 23 ಏಪ್ರಿಲ್ 2024, 12:33 IST
Last Updated 23 ಏಪ್ರಿಲ್ 2024, 12:33 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಬಂಧನ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಗೆ ಏಪ್ರಿಲ್‌ 24ರೊಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌, ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಸೋಮವಾರ ಸೂಚಿಸಿದೆ. ಕೇಜ್ರಿವಾಲ್ ಪರವಾಗಿ ಮಧ್ಯಂತರ ಆದೇಶ ನೀಡಲು ಕೋರ್ಟ್ ಒಪ್ಪಿಲ್ಲ.

ತಮ್ಮನ್ನು ಬಂಧಿಸಿರುವ ಇ.ಡಿ ಕ್ರಮವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ಗುಪ್ತ ಅವರು ಇದ್ದ ವಿಭಾಗೀಯ ಪೀಠವು ಇ.ಡಿ.ಗೆ ನೋಟಿಸ್‌ ಜಾರಿಗೆ ಆದೇಶಿಸಿದೆ. 

ಅರ್ಜಿಯ ವಿಚಾರಣೆಯನ್ನು ಪೀಠವು ಮುಂದಿನ ವಾರಕ್ಕೆ ನಿಗದಿ ಮಾಡಿದೆ. ಕೇಜ್ರಿವಾಲ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ‘ಕೋರ್ಟ್‌ನ ಆತ್ಮಸಾಕ್ಷಿಗೆ ಆಘಾತ ಉಂಟುಮಾಡುವ ಕೆಲವು ಸಂಗತಿಗಳನ್ನು ನಾನು ತಿಳಿಸಬೇಕಿದೆ’ ಎಂದು ಪೀಠಕ್ಕೆ ಹೇಳಿದರು.

‘ಇದು ಬಹಳ ಅಸಾಮಾನ್ಯ ಸಂಗತಿ’ ಎಂದು ಹೇಳಿದ ಅವರು, ಲೋಕಸಭಾ ಚುನಾವಣೆಯ ನೀತಿ ಸಂಹಿತೆಯು ಜಾರಿಗೆ ಬಂದ ನಂತರದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿದರು. ‘ಎಲ್ಲೆಡೆ ಆಯ್ದ ಕೆಲವು ಸಂಗತಿಗಳನ್ನು ಮಾತ್ರ ಸೋರಿಕೆ ಮಾಡಲಾಗುತ್ತಿದೆ. ಇದು ಎಲ್ಲರಲ್ಲಿಯೂ ತಪ್ಪು ಚಿತ್ರಣ ಮೂಡಿಸುತ್ತಿದೆ’ ಎಂದರು.

ಅಬಕಾರಿ ಪ್ರಕರಣದಲ್ಲಿ ಸಿಬಿಐ ಮತ್ತು ಇ.ಡಿ ಎಂಟು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿವೆ. ಆದರೆ ಯಾವುದರಲ್ಲೂ ಕೇಜ್ರಿವಾಲ್ ಹೆಸರು ಇಲ್ಲ. 2022ರ ಸೆಪ್ಟೆಂಬರ್‌ನಿಂದ 2024ರ ಮಾರ್ಚ್‌ವರೆಗಿನ ಅವಧಿಯಲ್ಲಿ 15 ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾ ಗಿದೆ. ಅವು ಯಾವುದರಲ್ಲೂ ಕೇಜ್ರಿವಾಲ್ ಹೆಸರು ಇಲ್ಲ ಎಂದು ಸಿಂಘ್ವಿ ವಿವರಿಸಿದರು.

ಸಿಂಘ್ವಿ ಅವರು ವಾದವನ್ನು ಮುಂದುವರಿಸಿದಾಗ ‘ನಿಮ್ಮ ವಾದವನ್ನು ಮುಂದಿನ ದಿನಕ್ಕಾಗಿ ಇಟ್ಟುಕೊಳ್ಳಿ’ ಎಂದು ನ್ಯಾಯಮೂರ್ತಿ ಖನ್ನಾ ಸೂಚಿಸಿದರು. ಲೋಕಸಭೆಯ ಮೊದಲ ಹಂತದ ಮತದಾನವು ಏಪ್ರಿಲ್‌ 19ರಂದು ನಡೆಯಲಿದೆ ಎಂದು ಸಿಂಘ್ವಿ ಹೇಳಿದರು.

ಇಂತಹ ಪ್ರಕರಣಗಳಲ್ಲಿ ಚುನಾವಣೆಯನ್ನು ಉಲ್ಲೇಖಿಸಲು ಅವಕಾಶ ಇಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ‘ನೋಟಿಸ್ ಜಾರಿಗೆ ನಾವು ಆದೇಶಿಸಿದ ನಂತರ ನೀವು ವಾದ ಮಾಡಬಾರದಿತ್ತು’ ಎಂದು ಹೇಳಿದ ಪೀಠವು, ‘ನಮಗೆ ವಿಷಯಗಳು ಗೊತ್ತಿವೆ’ ಎಂದು ತಿಳಿಸಿತು. ಕೇಜ್ರಿವಾಲ್ ಅವರು ಈಗ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT