ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯೂಸ್‌ಕ್ಲಿಕ್‌ ಪ್ರಕರಣ: ಸರ್ಕಾರದ ಪರ ಸಾಕ್ಷ್ಯ, ಕೋರ್ಟ್‌ಗೆ ಆರೋಪಿ ಅರ್ಜಿ

Published 25 ಡಿಸೆಂಬರ್ 2023, 14:31 IST
Last Updated 25 ಡಿಸೆಂಬರ್ 2023, 14:31 IST
ಅಕ್ಷರ ಗಾತ್ರ

ನವದೆಹಲಿ: ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಬಂಧಿತರಾಗಿರುವ, ‘ನ್ಯೂಸ್‌ಕ್ಲಿಕ್‌’ ಸುದ್ದಿ ಪೋರ್ಟಲ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ, ಅನಿರೀಕ್ಷಿತ ಬೆಳವಣಿಗೆಯಲ್ಲಿ ತಪ್ಪೊಪ್ಪಿಕೊಂಡಿದ್ದು ಪ್ರಕರಣದಲ್ಲಿ ಸರ್ಕಾರದ ಪರ ಸಾಕ್ಷ್ಯ ಹೇಳುವುದಾಗಿ ದೆಹಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಚೀನಾ ಪರವಾಗಿ ಪ್ರಚಾರ ಕೈಗೊಳ್ಳಲು ಪೋರ್ಟಲ್‌ ಹಣ ಪಡೆದಿದೆ ಎಂಬ ಆರೋಪದ ಸಂಬಂಧ ಅಮಿತ್‌ ಅವರನ್ನು ಬಂಧಿಸಲಾಗಿದೆ. ಇವರು ಕಳೆದ ವಾರ ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಹರ್‌ದೀಪ್ ಕೌರ್‌ ಅವರ ಎದುರು ಅರ್ಜಿ ಸಲ್ಲಿಸಿದ್ದಾರೆ.

ಉಲ್ಲೇಖಿತ ಪ್ರಕರಣದಲ್ಲಿ ಕ್ಷಮೆ ಕೋರಿರುವ ಆರೋಪಿ, ತನ್ನ ಬಳಿ ಸಾಂದರ್ಭಿಕ ಸಾಕ್ಷ್ಯಗಳಿದ್ದು, ಇವುಗಳನ್ನು ತನಿಖೆ ಕೈಗೊಂಡಿರುವ ದೆಹಲಿ ಪೊಲೀಸರ ಎದುರು ಬಹಿರಂಗಪಡಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಅಮಿತ್ ಅವರ ಹೇಳಿಕೆ ದಾಖಲಿಸಲು ಈ ಪ್ರಕರಣವನ್ನು ನ್ಯಾಯಾಧೀಶರು ಮ್ಯಾಜಿಸ್ಟ್ರಿಯಲ್‌ ಕೋರ್ಟ್‌ಗೆ ವರ್ಗಾಯಿಸಿದ್ದಾರೆ.

ಅರೋಪಿಯ ಅರ್ಜಿಯನ್ನು ಪರಿಶೀಲಿಸಿದ ಬಳಿಕವೇ ಕೋರ್ಟ್‌ನಲ್ಲಿ ಇದನ್ನು ಬೆಂಬಲಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಮಿತ್ ಮತ್ತು ಸುದ್ದಿ ಪೋರ್ಟಲ್‌ನ ಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರನ್ನು ಅಕ್ಟೋಬರ್‌ 3ರಂದು ದೆಹಲಿ ಪೊಲೀಸ್‌ ವಿಶೇಷ ಘಟಕದ ಸಿಬ್ಬಂದಿ ಬಂಧಿಸಿದ್ದರು. ಈ ಇಬ್ಬರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT