ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಆಪರೇಷನ್‌ ಕಮಲ ವಿಫಲ: ಎಎಪಿ ವಿಶ್ವಾಸಮತ ಸಾಬೀತು -ಕೇಜ್ರಿವಾಲ್‌

Last Updated 1 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಎಎಪಿ ಸರ್ಕಾರವು ವಿಧಾನಸಭೆಯಲ್ಲಿ ಗುರುವಾರ ವಿಶ್ವಾಸಮತ ಸಾಬೀತು ಮಾಡಿದೆ. ಬಿಜೆಪಿಯ ಆಪರೇಷನ್‌ ಕಮಲ ವಿಫಲವಾಗಿದೆ ಎಂಬುದನ್ನು ತೋರಿಸಲು ವಿಶ್ವಾಸಮತವನ್ನು ಸಾಬೀತು ಮಾಡಲು ಮುಂದಾದೆವು. ಈಗ ಬಿಜೆಪಿಯ ತಂತ್ರಗಾರಿಕೆಯನ್ನು ಸೋಲಿಸಿದ್ದೇವೆ ಎಂಬುದನ್ನು ಸಾಬೀತುಮಾಡಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಬಿಜೆಪಿ ಸೇರುವಂತೆ ಎಎಪಿಯ ಶಾಸಕರಿಗೆ ತಲಾ ₹20 ಕೋಟಿಯಂತೆ, ಒಟ್ಟು ₹800 ಕೋಟಿಯ ಆಮಿಷವನ್ನು ಬಿಜೆಪಿ ಒಡ್ಡುತ್ತಿದೆ ಎಂದು ಎಎಪಿ ಹಿಂದಿನ ವಾರ ಆರೋಪಿಸಿತ್ತು. ಹಣ ನೀಡಿ ಶಾಸಕರನ್ನು ಖರೀದಿಸುವುದು ಮತ್ತು ಆ ಮೂಲಕ ಎಎಪಿ ಸರ್ಕಾರವನ್ನು ಉರುಳಿಸಲು ಬಿಜೆಪಿ ತಂತ್ರ ರೂಪಿಸಿತ್ತು ಎಂದು ಎಎಪಿ ಆರೋಪಿಸಿತ್ತು. ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್‌ ಅವರು ಕರೆದಿದ್ದ ಸಭೆಗೆ ಹಲವು ಶಾಸಕರು ಗೈರುಹಾಜರಾಗಿದ್ದರು. ಬಿಜೆಪಿ ಇದನ್ನು ಲೇವಡಿ ಮಾಡಿತ್ತು. ಅದರ ಬೆನ್ನಲ್ಲೇವಿಶ್ವಾಸಮತ ಸಾಬೀತಿಗೆ ಎಎಪಿಯು ನೋಟಿಸ್‌ ನೀಡಿತ್ತು.

ದೆಹಲಿ ವಿಧಾನಸಭೆಯಲ್ಲಿ 70 ಸ್ಥಾನಗಳಿದ್ದು, ಎಎಪಿಯ 62 ಶಾಸಕರಿದ್ದಾರೆ. ಉಳಿದ ಎಂಟು ಸಾಸಕರು ಬಿಜೆಪಿಯವರು.ಸ್ಪೀಕರ್‌ ರಾಮ್ ನಿವಾಸ್ ಗೋಯಲ್‌ ಅವರು ಕೆನಡಾ ಪ್ರವಾಸದಲ್ಲಿ, ಎಎಪಿ ಶಾಸಕ ನರೇಶ್ ಬಲ್ಯಾನ್‌ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದ್ದಾರೆ. ಎಎಪಿಯ ಸತ್ಯೇಂದರ್ ಜೈನ್‌ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಈ ಮೂವರನ್ನು ಬಿಟ್ಟರೆ ಉಳಿದ 67 ಶಾಸಕರು ಗುರುವಾರ ಸದನದಲ್ಲಿ ಹಾಜರಿದ್ದರು.

ಬಿಜೆಪಿ ಶಾಸಕರು ಗಮನ ಸೆಳೆಯುವ ನೋಟಿಸ್‌ ನೀಡಿದ್ದರು. ಆ ನೋಟಿಸ್‌ ಕುರಿತೇ ಮೊದಲು ಚರ್ಚೆ ನಡೆಸಬೇಕು ಎಂದು ಸದನದಲ್ಲಿ ಅವರು ಒತ್ತಾಯಿಸಿದರು. ಅದನ್ನು ಡೆಪ್ಯುಟಿ ಸ್ಪೀಕರ್ ನಿರಾಕರಿಸಿದರು. ಆಗ ಬಿಜೆಪಿ ಶಾಸಕರು ಗದ್ದಲ ಉಂಟು ಮಾಡಿದರು. ಗದ್ದಲ ನಡೆಸಿದ ಮೂವರು ಶಾಸಕರನ್ನು ಮಾರ್ಷಲ್‌ಗಳು ಹೊರಕಳಿಸಿದರು. ಅದನ್ನು ವಿರೋಧಿಸಿ ಬಿಜೆಪಿಯ ಉಳಿದ ಐವರು ಶಾಸಕರು ಸಭಾತ್ಯಾಗ ಮಾಡಿದರು. ನಂತರ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಲಾಯಿತು.

ಸದನದಲ್ಲಿ ಹಾಜರಿದ್ದ ಎಎಪಿ ಶಾಸಕರೆಲ್ಲರೂ ನಿರ್ಣಯದ ಪರವಾಗಿ ಮತ ಹಾಕಿದರು. ಬಿಜೆಪಿಯ ಒಬ್ಬ ಶಾಸಕನೂ ಇರದಿದ್ದ ಕಾರಣ, ನಿರ್ಣಯದ ವಿರುದ್ಧ ಒಂದು ಮತವೂ ಬೀಳಲಿಲ್ಲ.

ಎಲ್‌ಜಿ ನಿವಾಸದ ಎದುರು ಪ್ರತಿಭಟನೆ
ದೆಹಲಿ ಲೆಫ್ಟಿನೆಂಟ್‌ ಗವರ್ನರ್ (ಎಲ್‌ಜಿ) ಮತ್ತು ಎಎಪಿ ಸರ್ಕಾರದ ನಡುವಣ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿ ಎಎಪಿ ಶಾಸಕರು ಗುರುವಾರ ರಾಜ್ಯಪಾಲರ ನಿವಾಸದ ಎದುರು ಧರಣಿ ನಡೆಸಿದ್ದಾರೆ. ಮತ್ತೊಂದೆಡೆ ಎಲ್‌ಜಿ ಮತ್ತು ಮುಖ್ಯಮಂತ್ರಿಗಳ ವಾರದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಕಚೇರಿ ತಿಳಿಸಿದೆ.

ದೆಹಲಿ ಪೊಲೀಸ್ ಇಲಾಖೆಯು ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.‘ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ. ಈ ಬಗ್ಗೆ ಎಲ್‌ಜಿ ಸಕ್ಸೇನಾ ಅವರ ಜತೆ ಚರ್ಚಿಸಬೇಕಿತ್ತು. ಹೀಗಾಗಿ ಅವರನ್ನು ಭೇಟಿಮಾಡಲು ಬಂದಿದ್ದೆವು. ಆದರೆ ಅವರ ಭೇಟಿಗೆ ಅವಕಾಶ ನೀಡಿಲ್ಲ’ ಎಂದು ಎಎಪಿ ಶಾಸಕರು ಹೇಳಿದ್ದಾರೆ.

ಗುರುವಾರ ಬೆಳಿಗ್ಗೆ ದೆಹಲಿ ವಿಧಾನಸಭೆಯಿಂದ ಮೆರವಣಿಗೆ ಹೊರಟ ಎಎಪಿ ಶಾಸಕರು, ರಾಜ್ಯಪಾಲರ ನಿವಾಸವನ್ನು ತಲುಪಿದ್ದರು. ಆದರೆ, ಎಎಪಿ ಶಾಸಕರು ಪೂರ್ವಾನುಮತಿ ಪಡೆಯದೇ ಇದ್ದ ಕಾರಣ, ಭೇಟಿಗೆ ಎಲ್‌ಜಿ ನಿರಾಕರಿಸಿದರು ಎನ್ನಲಾಗಿದೆ. ಭೇಟಿಗೆ ಅವಕಾಶ ನೀಡದೇ ಇದ್ದ ಕಾರಣ ಎಎಪಿ ಶಾಸಕರು ರಾಜ್ಯಪಾಲರ ನಿವಾಸದ ಎದುರೇ ಧರಣಿ ಕೂತರು.

ಸಭೆಗೆ ಸತತ ಗೈರು: ದೆಹಲಿ ಲೆಫ್ಟಿನೆಂಟ್‌ ಗವರ್ನರ್ ಮತ್ತು ಮುಖ್ಯಮಂತ್ರಿಯು ಪ್ರತಿವಾರ ಸಭೆ ನಡೆಯುವುದು ವಾಡಿಕೆ. ಆದರೆ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸತತವಾಗಿ ಮೂರು ಸಭೆಗಳಲ್ಲಿ ಭಾಗವಹಿಸಿಲ್ಲ ಮತ್ತು ಈಗ ನಾಲ್ಕನೇ ಸಭೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಈ ಶುಕ್ರವಾರ ಸಭೆ ನಡೆಯಬೇಕಿತ್ತು. ‘ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಶುಕ್ರವಾರ ಮತ್ತು ಶನಿವಾರ ಗುಜರಾತ್‌ ಪ್ರವಾಸದಲ್ಲಿ ಇರಲಿದ್ದಾರೆ. ಹೀಗಾಗಿ ಅವರು ವಾರದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿಯ ಕಚೇರಿಯು ಹೇಳಿದೆ.

ಆರೋಪ ಆಧಾರರಹಿತ
‘ನಾನು ದೆಹಲಿ ಜನತೆಗಾಗಿ ಉತ್ತಮ ಆಡಳಿತ ಮತ್ತು ಉತ್ತಮ ಸೇವೆ ನೀಡುವುದು, ಭ್ರಷ್ಟಾಚಾರದ ವಿರುದ್ಧ ಸಂಪೂರ್ಣ ಅಸಹಿಷ್ಣುತೆ ತೋರುವುದು ನನ್ನ ಉದ್ದೇಶ. ಆದರೆ ದೆಹಲಿಯ ಗೌರವಾನ್ವಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಅವರು ಈ ತಂತ್ರ ಬಳಸುತ್ತಿದ್ದಾರೆ’ ಎಂದು ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ಆರೋಪಿಸಿದ್ದಾರೆ.

2016ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿದ್ದಾಗ ಸಕ್ಸೇನಾ ಅವರು ಅಕ್ರಮ ಎಸಗಿದ್ದರು. ನೋಟುರದ್ದತಿ ಸಂದರ್ಭದಲ್ಲಿ ₹1,400 ಕೋಟಿಯಷ್ಟು ಮೊತ್ತದ ರದ್ದಾದ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಂಡಿದ್ದಾರೆ ಎಂದು ಎಎಪಿ ಶಾಸಕರು ದೆಹಲಿ ವಿಧಾನಸಭೆಯಲ್ಲಿ ಆರೋಪಿಸಿದ್ದರು.

‘ಮುಂದಿನ ದಿನಗಳಲ್ಲಿ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ವಿರುದ್ಧ ಇಂತಹ ಆಧಾರರಹಿತ ಆರೋಪಗಳ ಸಂಖ್ಯೆ ಹೆಚ್ಚಲಿದೆ. ಆದರೆ, ಎಂತಹ ಒತ್ತಡದ ಸಂದರ್ಭದಲ್ಲೂ ನಾನು ಕರ್ತವ್ಯವಿಮುಖನಾಗುವುದಿಲ್ಲ ಎಂಬುದನ್ನು ಕೇಜ್ರಿವಾಲ್‌ ಅರ್ಥ ಮಾಡಿಕೊಳ್ಳಬೇಕು. ದೆಹಲಿ ಜನರ ಜೀವನಮಟ್ಟ ಸುಧಾರಿಸುವಲ್ಲಿ ನನ್ನ ಬದ್ಧತೆಯನ್ನು ಮುಕ್ಕಾಗಿಸಲು ಸಾಧ್ಯವಿಲ್ಲ’ ಎಂದು ಸಕ್ಸೇನಾ ಹೇಳಿದ್ದಾರೆ.

ಎಎಪಿ ಶಾಸಕರು ಮಾಡಿರುವ ಆರೋಪದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಕ್ಸೇನಾ ನಿರ್ಧರಿಸಿದ್ದಾರೆ ಎಂದು ರಾಜಭವನದ ಮೂಲಗಳು ಹೇಳಿವೆ.

*
ಮನೀಷ್‌ ಮನೆಯಲ್ಲಿ ಸಿಬಿಐ ಶೋಧದ ಮೂಲಕ ಪ್ರಧಾನಿ, ಗುಜರಾತ್‌ನಲ್ಲಿ ನಮ್ಮ ಮತವನ್ನು ಶೇ 4ರಷ್ಟು ಹೆಚ್ಚಿಸಿದ್ದಾರೆ. ಬಂಧಿಸಿದರೆ ಅದು ಇನ್ನೂ ಶೇ 6ರಷ್ಟು ಹೆಚ್ಚುತ್ತದೆ.
-ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT