ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್‌ ಬಂಧನ: 3 ದಿನ ಸಿಬಿಐ ಕಸ್ಟಡಿಗೆ

ಅಬಕಾರಿ ನೀತಿ ಹಗರಣದ ಭ್ರಷ್ಟಾಚಾರ ಪ್ರಕರಣ * ಬಿಜೆಪಿಯಿಂದ ಸಿಬಿಐ ದುರ್ಬಳಕೆ– ಎಎಪಿ ಆರೋಪ
Published 27 ಜೂನ್ 2024, 0:12 IST
Last Updated 27 ಜೂನ್ 2024, 0:12 IST
ಅಕ್ಷರ ಗಾತ್ರ

ನವದೆಹಲಿ: ತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಬುಧವಾರ ಬಂಧಿಸಿದ್ದು,  ದೆಹಲಿ ನ್ಯಾಯಾಲಯವು ಅವರನ್ನು ಮೂರು ದಿನಗಳವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ.

ವಿಶೇಷ ನ್ಯಾಯಾಧೀಶರಿಂದ ಅನುಮತಿ ಪಡೆದ ಬಳಿಕ ಸಿಬಿಐ, ಕೇಜ್ರಿವಾಲ್‌ ಅವರನ್ನು ಬಂಧಿಸಿತು. ಆ ಬಳಿಕ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿರುವ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ನೀಡಲಾಗಿದ್ದ ಜಾಮೀನಿಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

‘ಪ್ರಕರಣದಲ್ಲಿ ದೊಡ್ಡ ಪಿತೂರಿ ನಡೆದಿದ್ದು, ಅದನ್ನು ಬಹಿರಂಗಪಡಿಸಲು ಕೇಜ್ರಿವಾಲ್‌ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಹೀಗಾಗಿ ಅವರನ್ನು ಐದು ದಿನಗಳ ಕಾಲ ತನ್ನ ಕಸ್ಟಡಿಗೆ ವಹಿಸುವಂತೆ’ ಸಿಬಿಐ ಅರ್ಜಿಯಲ್ಲಿ ಕೋರಿತ್ತು.

‘ಕೇಜ್ರಿವಾಲ್‌ ಅವರು ದುರುದ್ದೇಶದಿಂದ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ಚುನಾವಣೆಗೂ ಮುನ್ನ ನಾವು ಈ ಪ್ರಕ್ರಿಯೆಗಳನ್ನು ನಡೆಸಬಹುದಿತ್ತು. ಆದರೆ ಆ ರೀತಿ ಮಾಡಿಲ್ಲ. ನಾವು, ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ’ ಎಂದೂ ಸಿಬಿಐ ಪರ ವಕೀಲರು ಹೇಳಿದರು.

‘ಕೇಜ್ರಿವಾಲ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಅವರು ಸಹ ಅರೋಪಿಯಾದ ವಿಜಯ್‌ ನಾಯರ್‌ ತನ್ನ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬುದನ್ನು ಗುರುತಿಸಿಲ್ಲ. ಸಚಿವರಾದ ಆತಿಶಿ ಮತ್ತು ಸೌರಭ್‌ ಭಾರದ್ವಾಜ್‌ ಅವರ ಅಡಿಯಲ್ಲಿ ನಾಯರ್‌ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ. ಅಲ್ಲದೆ ಅವರು ಸಂಪೂರ್ಣ ಜವಾಬ್ದಾರಿಯನ್ನು ಮನೀಶ್‌ ಸಿಸೋಡಿಯಾ ಅವರ ಮೇಲೆ ಹಾಕಿದ್ದಾರೆ. ಈ ಬಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸಬೇಕಿದ್ದು, ದಾಖಲೆಗಳನ್ನು ಪರಿಶೀಲಿಸಬೇಕಿದೆ’ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. 

‘ದಕ್ಷಿಣದ ಲಾಬಿ’ ಗುಂಪು ಕೋವಿಡ್‌–19ರ ಅಲೆ ಉತ್ತುಂಗ ಮಟ್ಟದಲ್ಲಿದ್ದಾಗ ದೆಹಲಿಗೆ ಭೇಟಿ ನೀಡಿತ್ತು ಎಂದೂ ಸಿಬಿಐ ಹೇಳಿದೆ.

ಈಗ ರದ್ದಾಗಿರುವ ಅಬಕಾರಿ ನೀತಿಯನ್ನು ರೂಪಿಸಲು ‘ದಕ್ಷಿಣ ಲಾಬಿ’ ಗುಂಪಿನವರು ನಿರ್ದೇಶಿಸಿದ್ದಾರೆ. ಇದರಲ್ಲಿ ದೆಹಲಿ ಮುಖ್ಯಮಂತ್ರಿ ಭಾಗಿಯಾಗಿದ್ದಾರೆ ಎಂದು ತನಿಖಾ ಸಂಸ್ಥೆಗಳು ಈ ಹಿಂದೆ ಪ್ರತಿಪಾದಿಸಿದ್ದವು.

‘ಅವರು ವರದಿಯನ್ನು ತಯಾರಿಸಿ ಅಭಿಷೇಕ್‌ ಬೋಯನಪಲ್ಲಿಗೆ ನೀಡಿದ್ದರು. ಅದನ್ನು ವಿಜಯ್‌ ನಾಯರ್ ಮೂಲಕ ಮನೀಶ್‌ ಸಿಸೋಡಿಯಾ ಅವರಿಗೆ ಕಳುಹಿಸಲಾಗಿದೆ. ಯವುದೇ ಸಭೆ ನಡೆಯದೇ, ಸಹಿಗಳನ್ನು ಪಡೆಯಲಾಗಿದೆ. ಅದೇ ದಿನ ಅದರ ಅಧಿಸೂಚನೆಯೂ ಹೊರಬಂದಿದೆ. ಇದೆಲ್ಲ ತರಾತುರಿಯಲ್ಲಿ ಆಗಿ ಹೋಗಿದೆ. ಕೋವಿಡ್‌ ಸಂದರ್ಭದಲ್ಲಿ ಆಡಳಿತದ ವ್ಯವಹಾರಗಳನ್ನು ಪ್ರಮುಖವಾಗಿ ನಿರ್ವಹಿಸುತ್ತಿದ್ದವರು ಯಾರು? ಮುಖ್ಯಮಂತ್ರಿ ಅಲ್ಲವೇ. ಅದಕ್ಕೆ ಅವರ ನಿರ್ದೇಶನವೂ ಇದೆ. ದಕ್ಷಿಣ ಲಾಬಿ ಗುಂಪಿನವರು ದೆಹಲಿಯಲ್ಲಿ ಕುಳಿತು ಅದೆಲ್ಲ ಆಗುವಂತೆ ನೋಡಿಕೊಂಡಿದ್ದಾರೆ’ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

ಕೇಜ್ರಿವಾಲ್‌ ಅವರನ್ನು ಕಸ್ಟಡಿಗೆ ಕೋರಿ ಸಿಬಿಐ ಸಲ್ಲಿಸಿದ ಅರ್ಜಿಯು ಸಂಪೂರ್ಣವಾಗಿ ಅಸ್ಪಷ್ಟವಾಗಿದೆ ಎಂದು ಕೇಜ್ರಿವಾಲ್‌ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು.

ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್‌ ಅವರನ್ನು ಮಂಗಳವಾರ ಸಂಜೆ ವಿಚಾರಣೆಗೆ ಒಳಪಡಿಸಿದ ಕುರಿತು ನ್ಯಾಯಾಲಯದ ಆದೇಶ ಸೇರಿದಂತೆ, ವಿಚಾರಣೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಸಿಬಿಐಗೆ ಸೂಚಿಸುವಂತೆ ಕೇಜ್ರಿವಾಲ್‌ ಪರ ವಕೀಲರು ನ್ಯಾಯಾಲಯವನ್ನು ಕೋರಿದರು.

ಸಿಬಿಐ ದುರ್ಬಳಕೆ– ಎಎಪಿ ಆರೋಪ:

‘ಸರ್ವಾಧಿಕಾರಿ ಧೋರಣೆಯು ಎಲ್ಲ ಮಿತಿಗಳನ್ನು ಮೀರಿದೆ. ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ. ಕೇಜ್ರಿವಾಲ್‌ ಅವರಿಗೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಸಿಗುವ ಸಾಧ್ಯತೆಗಳಿದ್ದವು. ಇದರಿಂದ ಗಾಬರಿಗೊಂಡಿರುವ ಬಿಜೆಪಿಯು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಂಡು ನಕಲಿ ಪ್ರಕರಣದಲ್ಲಿ ಅವರನ್ನು ಬಂಧಿಸಿದೆ. ಬಿಜೆಪಿಯ ಪ್ರತಿ ಷಡ್ಯಂತ್ರಕ್ಕೂ ಉತ್ತರ ಸಿಗುತ್ತದೆ. ಕೊನೆಗೆ ಸತ್ಯ ಗೆಲ್ಲುತ್ತದೆ’ ಎಂದು ಎಎಪಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ.

ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌, ‘ಇಡೀ ದೇಶ ಬಿಜೆಪಿಯ ದೌರ್ಜನ್ಯವನ್ನು ಗಮನಿಸುತ್ತಿದೆ. ದೇಶದ ಜನರು ಇದರ ವಿರುದ್ಧ ನಿಲ್ಲುತ್ತಾರೆ’ ಎಂದು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ನಾನು ನಿರಪರಾಧಿ: ಕೇಜ್ರಿವಾಲ್‌

ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ಅರವಿಂದ ಕೇಜ್ರಿವಾಲ್‌ ‘ನಾನು ಈ ಪ್ರಕರಣದಲ್ಲಿ ನಿರಪರಾಧಿ ಆಗಿದ್ದೇನೆ. ಅಲ್ಲದೆ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಮತ್ತು ಎಎಪಿ ಸಹ ನಿರಾಪರಾಧಿ’ ಎಂದು ಹೇಳಿದರು. ‘ನಾನು ಸಂಪೂರ್ಣ ಆರೋಪವನ್ನು ಸಿಸೋಡಿಯಾ ಅವರ ಮೇಲೆ ಹೊರಿಸಿದ್ದೇನೆ ಎಂದು ಸಿಬಿಐ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ ನಾನು ಸಿಸೋಡಿಯಾ ಸೇರಿದಂತೆ ಯಾರನ್ನೂ ತಪ್ಪತಸ್ಥರು ಎಂದು ಯಾವುದೇ ಹೇಳಿಕೆ ನೀಡಿಲ್ಲ. ಈ ಪ್ರಕರಣದಲ್ಲಿ ಸಿಸೋಡಿಯಾ ಎಎಪಿ ಮತ್ತು ನಾನು ನಿರಪರಾಧಿಗಳೇ ಆಗಿದ್ದೇವೆ’ ಎಂದು ಅವರು ಪ್ರತಿಪಾದಿಸಿದರು. ‘ನಮ್ಮ ಮಾನಹಾನಿ ಮಾಡುವುದೇ ಅವರ ಸಂಪೂರ್ಣ ಯೋಜನೆಯ ಉದ್ದೇಶ. ಇದನ್ನೆಲ್ಲ ಸಿಬಿಐ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಪ್ರಕಟಿಸುತ್ತಿವೆ ಎಂಬುದನ್ನು ದಾಖಲಿಸಬೇಕಿದೆ’ ಎಂದು ಅವರು ತಿಳಿಸಿದರು. ‘ಸಿಬಿಐ ಈ ವಿಷಯದಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಇದು ಪತ್ರಿಕೆಗಳಲ್ಲಿ ಪ್ರಮುಖವಾಗಿ ಬಿತ್ತರವಾಗುವಂತೆ ನೋಡಿಕೊಳ್ಳುತ್ತಿದೆ’ ಎಂದು ಅವರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಐ ಪರ ವಕೀಲರು ‘ಈ ಸಂಬಂಧ ಸಿಬಿಐ ಮೂಲಗಳು ಏನನ್ನೂ ಹೇಳಿಲ್ಲ’ ಎಂದರು. ‘ಮಾಧ್ಯಮಗಳು ಒಂದು ಸಾಲನ್ನಷ್ಟೇ ತೆಗೆದುಕೊಳ್ಳುತ್ತವೆ’ ಎಂದ ನ್ಯಾಯಾಧೀಶರು ‘ಮಾಧ್ಯಮಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟವಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT