ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ಇ.ಡಿ ಕಸ್ಟಡಿ ಏ.1ರ ವರೆಗೆ ವಿಸ್ತರಣೆ

Published 28 ಮಾರ್ಚ್ 2024, 10:58 IST
Last Updated 28 ಮಾರ್ಚ್ 2024, 10:58 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ನೀಡಲಾಗಿದ್ದ ಅವಧಿಯನ್ನು ಇಲ್ಲಿನ ರೋಸ್‌ ಅವೆನ್ಯೂ ನ್ಯಾಯಾಲಯವು ಏಪ್ರಿಲ್‌ 1ರವರೆಗೆ ವಿಸ್ತರಿಸಿದೆ.

ಕಸ್ಟಡಿ ಅವಧಿ ಗುರುವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಿದ ಇ.ಡಿ, ಮತ್ತೆ ಏಳು ದಿನಗಳವರೆಗೆ ತನ್ನ ವಶಕ್ಕೆ ನೀಡುವಂತೆ ಕೋರಿತು.

‘ಐದು ದಿನಗಳ ಕಾಲ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸಿ, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. ಆದರೆ, ಅವರು ಸಮರ್ಪಕ ಉತ್ತರ ನೀಡದೇ ನುಣುಚಿಕೊಳ್ಳುತ್ತಿದ್ದರು’ ಎಂದು ಇ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.

ಇ.ಡಿ. ಮನವಿ ತಿರಸ್ಕರಿಸಿದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ, ಏಪ್ರಿಲ್ 1ರಂದು ಬೆಳಿಗ್ಗೆ 11ಕ್ಕೆ ಕೇಜ್ರಿವಾಲ್‌ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ಸೂಚಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಇತರ ಮೂವರ ಹೇಳಿಕೆಗಳನ್ನು ಸಹ ದಾಖಲಿಸಿಕೊಳ್ಳಲಾಗಿದೆ ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಇ.ಡಿ. ತಿಳಿಸಿತು.

ಇ.ಡಿ ಅರ್ಜಿಯಲ್ಲಿ ಹೇಳಿದ್ದೇನು? : ‘ವಿಚಾರಣೆ ವೇಳೆ, ಆಗಿನ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಸಿ.ಅರವಿಂದ ಅವರನ್ನು ಕೇಜ್ರಿವಾಲ್‌ ಜೊತೆ ಮುಖಾಮುಖಿಯಾಗಿಸಲಾಯಿತು. 2021–22ರ ಅಬಕಾರಿ ನೀತಿಗೆ ಸಂಬಂಧಿಸಿದ ಸಚಿವರ ಗುಂಪಿನ (ಜಿಒಎಂ) ಕರಡು ವರದಿಯನ್ನು ಮುಖ್ಯಮಂತ್ರಿ ನಿವಾಸದಲ್ಲಿ ಸಿ.ಅರವಿಂದ ಅವರು ಹಸ್ತಾಂತರಿಸಿದ್ದರು. ಈ ಕುರಿತು ಪ್ರಶ್ನಿಸಲಾಯಿತು’ ಎಂದು ಇ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.

‘ಕೇಜ್ರಿವಾಲ್‌ ಅವರು ಕಸ್ಟಡಿಯಲ್ಲಿದ್ದಾಗ, 2022ರಲ್ಲಿ ನಡೆದ ಗೋವಾ ವಿಧಾನಸಭೆ ಚುನಾವಣೆಯ ಎಎಪಿ ಅಭ್ಯರ್ಥಿಯಾಗಿದ್ದವರೊಬ್ಬರ ಹೇಳಿಕೆಯನ್ನು ಸಹ ದಾಖಲಿಸಿಕೊಳ್ಳಲಾಗಿದೆ. ಚುನಾವಣೆ ವೆಚ್ಚಕ್ಕಾಗಿ ಅಭ್ಯರ್ಥಿ ಬಳಿ ಹಣ ಇರಲಿಲ್ಲ. ಎಲ್ಲ ವೆಚ್ಚವನ್ನು ದೆಹಲಿಯಲ್ಲಿರುವ ಎಎಪಿ ಕಚೇರಿಯಿಂದ ನೋಡಿಕೊಳ್ಳಲಾಗುತ್ತಿತ್ತು ಎಂಬ ಅಂಶ ವಿಚಾರಣೆ ವೇಳೆ ಬಹಿರಂಗವಾಯಿತು’ ಎಂದೂ ಇ.ಡಿ. ತಿಳಿಸಿದೆ.

‘ಕಸ್ಟಡಿ ಅವಧಿಯಲ್ಲಿ, ಕೇಜ್ರಿವಾಲ್‌ ಅವರ ಪತ್ನಿಯ ಮೊಬೈಲ್‌ ಫೋನ್‌ನಲ್ಲಿದ್ದ ದತ್ತಾಂಶವನ್ನು ಸಂಗ್ರಹಿಸಲಾಗಿದ್ದು, ವಿಶ್ಲೇಷಿಸಲಾಗುತ್ತಿದೆ’ ಎಂದು ಕೇಜ್ರಿವಾಲ್‌ ಅವರ ಕಸ್ಟಡಿ ವಿಸ್ತರಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯಲ್ಲಿ ಇ.ಡಿ. ಮಾಹಿತಿ ನೀಡಿದೆ.

‘ಮಾರ್ಚ್‌ 21ರಂದು ಕೇಜ್ರಿವಾಲ್‌ ನಿವಾಸದಲ್ಲಿ ನಡೆಸಿದ ಶೋಧದ ವೇಳೆ ನಾಲ್ಕು ಡಿಜಿಟಲ್‌ ಸಾಧನಗಳನ್ನು ಜಪ್ತಿ ಮಾಡಲಾಗಿದೆ. ತಮ್ಮ ವಕೀಲರೊಂದಿಗೆ ಸಮಾಲೋಚನೆ ನಡೆಸಿದ ನಂತರ ಲಾಗಿನ್‌ ವಿವರಗಳು ಹಾಗೂ ಪಾಸ್‌ವರ್ಡ್‌ ಒದಗಿಸಲು ಕೇಜ್ರಿವಾಲ್‌ ಸಮಯಾವಕಾಶ ಕೇಳಿದ್ದಾರೆ. ಈ ವಿವರಗಳು ಸಿಕ್ಕನಂತರ ಈ ಸಾಧನಗಳಲ್ಲಿನ ದತ್ತಾಂಶ ಸಂಗ್ರಹಿಸಲಾಗುವುದು’ ಎಂದು ಇ.ಡಿ ತಿಳಿಸಿದೆ.

‘ಸ್ಥಿರಾಸ್ತಿ, ಚರಾಸ್ತಿ, ಆದಾಯ ತೆರಿಗೆ ರಿಟರ್ನ್ಸ್‌ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಇತರ ವಿವರಗಳನ್ನು ಕೇಳಿದ್ದೇವೆ. ಮುಖ್ಯಮಂತ್ರಿ ಕೇಜ್ರಿವಾಲ್‌ ಅಥವಾ ಅವರ ಕುಟುಂಬದ ಸದಸ್ಯರು ಈ ವಿವರಗಳನ್ನು ಒದಗಿಸಬೇಕಿದೆ’.

‘ಮುಖ್ಯಮಂತ್ರಿಗಳ ಕಚೇರಿಯಲ್ಲಿ ಆನ್‌ಲೈನ್‌ ಪೋರ್ಟಲ್‌ ಮೂಲಕ ಮಾಡಲಾಗಿರುವ ನೇಮಕಾತಿಗಳ ಕುರಿತು ವಿವರಗಳನ್ನು ಒದಗಿಸುವಂತೆ ಕೇಳಲಾಗಿದೆ’ ಎಂದೂ ಇ.ಡಿ. ತನ್ನ ಅರ್ಜಿಯಲ್ಲಿ ತಿಳಿಸಿದೆ.

‘ದೆಹಲಿಯಲ್ಲಿರುವ ಕೆಲ ಸಗಟು ಮದ್ಯ ವರ್ತಕರ ಮೇಲೆ ಒತ್ತಡ ಹೇರಿರುವ ಆರೋಪಗಳಿಗೆ ಇವೆ. ಇದರಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಪಂಜಾಬ್‌ನ ಕೆಲ ಹಿರಿಯ ಅಬಕಾರಿ ಅಧಿಕಾರಿಗಳಿಗೆ ಸಮನ್ಸ್‌ ನೀಡಲಾಗಿದೆ. ಸಂಗ್ರೂರ್‌ನಲ್ಲಿ ಸಂಭವಿಸಿದ ಸಾರಾಯಿ ದುರಂತದ ಕಾರಣ ನೀಡಿರುವ ಅಧಿಕಾರಿಗಳು, ಸಮನ್ಸ್‌ಗೆ ಪ್ರತಿಕ್ರಿಯಿಸಲು ಸಮಯ ಕೇಳಿದ್ದಾರೆ’ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

‘ಈ ಎಲ್ಲ ಕಾರಣಗಳು ಅಥವಾ ಪತ್ತೆಯಾಗಿರುವ ಅಂಶಗಳಿಂದಾಗಿ, ಬಂಧಿತರನ್ನು ಇನ್ನೂ ಮತ್ತಷ್ಟು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಹಾಗಾಗಿ, ಕೇಜ್ರಿವಾಲ್‌ ಅವರ ಕಸ್ಟಡಿ ಅವಧಿಯನ್ನು ಮತ್ತೆ 7 ದಿನಗಳ ಕಾಲ ವಿಸ್ತರಿಸಬೇಕು’ ಎಂದು ಇ.ಡಿ. ಅರ್ಜಿಯಲ್ಲಿ ಕೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT