ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಬಿಜೆಪಿ–ಕಾಂಗ್ರೆಸ್‌ ನಾಯಕರ ವಾಕ್ಸಮರ

ಮಧ್ಯಪ್ರದೇಶದಲ್ಲಿ ರಂಗೇರಿದ ಚುನಾವಣಾ ಕಣ
Published 14 ಅಕ್ಟೋಬರ್ 2023, 15:59 IST
Last Updated 14 ಅಕ್ಟೋಬರ್ 2023, 15:59 IST
ಅಕ್ಷರ ಗಾತ್ರ

ಭೋಪಾಲ್ (ಪಿಟಿಐ): ರಾಜ್ಯದಲ್ಲಿ ಸಾರ್ವಜನಿಕ ಕಲ್ಯಾಣ ಯೋಜನೆಗಳ ಅನುಷ್ಠಾನ ಕುರಿತು ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ನಡುವೆ ವಾಕ್ಸಮರ ನಡೆದಿದೆ. 

‘ಚೌಹಾಣ್ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷದಂತೆ ಕಾಂಗ್ರೆಸ್‌ನಲ್ಲಿ ಸರ್ವಾಧಿಕಾರವಿಲ್ಲ’ ಎಂದು ಪ್ರಿಯಾಂಕಾ ಪ್ರತಿಪಾದಿಸಿದರೆ, ‘ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಏಕೆ ನಿಲ್ಲಿಸಲಾಯಿತು’ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.

‘ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲ್ ನಾಥ್ ಅವರು ಸುಳ್ಳು ಘೋಷಣೆಗಳನ್ನು ಮಾಡುವಂತೆ ಒತ್ತಾಯಿಸುವ ಮೂಲಕ ಗಾಂಧಿ ಕುಟುಂಬಕ್ಕೆ ಮೋಸ ಮಾಡುತ್ತಿದ್ದಾರೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಶುಕ್ರವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಸಂಜೆ ‘ಎಕ್ಸ್‌’ನಲ್ಲಿ ತಿರುಗೇಟು ನೀಡಿದ ಪ್ರಿಯಾಂಕಾ, ‘ತಮ್ಮ ಪಕ್ಷವು ಶಿಕ್ಷಣ ಮತ್ತು ಮಕ್ಕಳ ಬಗ್ಗೆ ಮಾತನಾಡುತ್ತಿದ್ದರೆ, ಜನರ ಗಮನವನ್ನು ಬೇರೆಡೆಗೆ ಸೆಳೆಯುವವರು ಬೇರೊಂದು ವಿಷಯವನ್ನು ಅರ್ಥ ಮಾಡಿಕೊಂಡಂತೆ ತೋರುತ್ತದೆ. ಕಾಂಗ್ರೆಸ್‌ನಲ್ಲಿ ಸರ್ವಾಧಿಕಾರವಿಲ್ಲ’ ಎಂದರು. 

ವಿದ್ಯಾರ್ಥಿವೇತನ ಯೋಜನೆಯಡಿ ಜಾತಿ, ಧರ್ಮ ಮತ್ತು ವರ್ಗ ಲೆಕ್ಕಿಸದೆ ಮಧ್ಯಪ್ರದೇಶದ ಪ್ರತಿ ಮಗುವಿಗೆ ತಮ್ಮ ಪಕ್ಷವು ವಿದ್ಯಾರ್ಥಿವೇತನ ನೀಡಲಿದೆ ಎಂದು ಅವರ ಸ್ಪಷ್ಟಪಡಿಸಿದರು.

ಇದಕ್ಕೆ ‘ಎಕ್ಸ್‌’ನಲ್ಲಿ ಪ್ರತಿಕ್ರಿಯೆ ನೀಡಿದ ಚೌಹಾಣ್, ‘ನಾನು ಗಮನವನ್ನು ಬೇರೆಡೆಗೆ ಸೆಳೆಯುತ್ತಿಲ್ಲ, ಆದರೆ, ಗಮನ ಸೆಳೆಯುತ್ತಿದ್ದೇನೆ. ನಿಮಗೆ ಭರವಸೆಗಳನ್ನು ಘೋಷಿಸುವಂತೆ ಹೇಳಿದ ವ್ಯಕ್ತಿಗಳ ಸಾಧನೆ ಕಳಪೆ ಇದೆ’ ಎಂದು ಕಿಡಿಕಾರಿದ್ದಾರೆ.

‘ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಮತ್ತು ಬೈಸಿಕಲ್ ವಿತರಣೆ ಸೇರಿದಂತೆ ಯೋಜನೆಗಳನ್ನು ಏಕೆ ನಿಲ್ಲಿಸಿದ್ದೀರಿ ಎಂದು ಪ್ರಿಯಾಂಕಾ ಅವರು ಕಮಲ್ ನಾಥ್ ಅವರನ್ನು ಕೇಳಬೇಕು. ಶಾಲಾ ಶಿಕ್ಷಣ ಸೇರಿದಂತೆ ಅನೇಕ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಏಕೆ ನಿಲ್ಲಿಸಲಾಯಿತು?. ಕಾಂಗ್ರೆಸ್‌ ಸರ್ಕಾರವು ಯಾವ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಿದೆ ಎಂಬುದನ್ನು ನಿಮಗೆ ಕಾಲಕಾಲಕ್ಕೆ ನೆನಪಿಸುತ್ತೇನೆ’ ಎಂದು ಅವರು ಹೇಳಿದರು.

ಚೌಹಾಣ್‌ಗೆ ತಿರುಗೇಟು ನೀಡಿದ ರಾಜ್ಯ ಕಾಂಗ್ರೆಸ್‌ ಘಟಕದ ಮುಖ್ಯಸ್ಥ ಕಮಲ್ ನಾಥ್, ‘ಚೌಹಾಣ್ ಅವರು ಗಾಂಧಿ ಕುಟುಂಬದ ವಿರುದ್ಧ ಅನುಚಿತ ಭಾಷೆ ಬಳಸುತ್ತಿದ್ದಾರೆ. ಪ್ರಿಯಂಕಾ ಅವರ ತಂದೆ ರಾಜೀವ್ ಗಾಂಧಿ ತಾಯ್ನಾಡಿಗಾಗಿ ತಮ್ಮ ಪ್ರಾಣ ಅರ್ಪಿಸಿದರು. ಅವರ ಅಜ್ಜಿ ಇಂದಿರಾ ಗಾಂಧಿ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಜೀವನ ಅರ್ಪಿಸಿದರು. ಇಡೀ ದೇಶವು ಗಾಂಧಿ ಕುಟುಂಬದ ಬಗ್ಗೆ ಹೆಮ್ಮೆ ಪಡುತ್ತದೆ. ಕಾಂಗ್ರೆಸ್‌ ಪಕ್ಷವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT