ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ, ಬಿಹಾರದಲ್ಲಿ ಭಾರಿ ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

* ಸಂಕಷ್ಟದಲ್ಲಿರುವ ಅಸ್ಸಾಂನ 24 ಲಕ್ಷ ಜನ
Published 7 ಜುಲೈ 2024, 13:35 IST
Last Updated 7 ಜುಲೈ 2024, 13:35 IST
ಅಕ್ಷರ ಗಾತ್ರ

ಗುವಾಹಟಿ/ಪಟ್ನಾ/ಮುಂಬೈ: ಬಿಹಾರ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇಲ್ಲಿನ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಅಸ್ಸಾಂನಲ್ಲಿನ ಪ್ರವಾಹದ ಕಾರಣ, 29 ಜಿಲ್ಲೆಗಳ ಸುಮಾರು 24 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಐದು ದಿನಗಳಲ್ಲಿ ಭಾರಿ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅಸ್ಸಾಂನಾದ್ಯಂತ ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಡುಬ್ರಿ ಜಿಲ್ಲೆಯಲ್ಲಿಯೇ ಅಧಿಕ ಹಾನಿ ಉಂಟಾಗಿದ್ದು, 7.95 ಲಕ್ಷ ಜನರು ಅಪಾಯದಲ್ಲಿದ್ದಾರೆ. ನಂತರದಲ್ಲಿ ಕಾಛರ್‌ ಹಾಗೂ ದರಂಗ್‌ ಜಿಲ್ಲೆಗಳಿದ್ದಾವೆ. ಪ್ರತಿ ಜಿಲ್ಲೆಯಲ್ಲೂ 1.50 ಲಕ್ಷ ಜನರು ಬಾಧಿತರಾಗಿದ್ದಾರೆ. 577 ನಿರಾಶ್ರಿತ ಶಿಬಿರಗಳಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದಾರೆ. ಭಾರಿ ಮಳೆಯ ಕಾರಣ ರಾಜ್ಯದಾದ್ಯಂತ ಸೇತುವೆಗಳಿಗೆ ಹಾಗೂ ರಸ್ತೆಗಳಿಗೆ ಹಾನಿಯಾಗಿರುವುದು ವರದಿಯಾಗಿದೆ.

‘ಶನಿವಾರದಿಂದ ಭಾನುವಾರದವರೆಗೆ ಬಿಹಾರದಲ್ಲಿ ಸುರಿದ ಭಾರಿ ಮಳೆಯ ಕಾರಣಕ್ಕಾಗಿ ಇಲ್ಲಿನ ಪ್ರಮುಖ ನದಿಗಳಾದ ಕೋಸಿ, ಮಹಾನಂದ, ಭಾಗಮತಿ, ಗಂಡಕ್‌, ಕಮಲಾ ಬಲಾನ್‌ ಹಾಗೂ ಕಮಲಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ’ ಎಂದು ಜಲಸಂಪನ್ಮೂಲ ಇಲಾಖೆಯು ಭಾನುವಾರ ತಿಳಿಸಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಈ ನದಿಗಳು ಎಚ್ಚರಿಕೆ ಮಟ್ಟವನ್ನು ತಲುಪಿದ್ದರೆ, ಕೆಲವೆಡೆ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.

‘ಬಿಹಾರದಲ್ಲಿ ಮಳೆಯ ಕಾರಣ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ. ಆದರೆ, ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳೀಯ ಜಿಲ್ಲಾಡಳಿತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಠಾಣೆ ಜಿಲ್ಲೆಯ ರೆಸಾರ್ಟ್‌ವೊಂದು ನೀರಿನಲ್ಲಿ ಮುಳುಗಿದೆ. ಈ ರೆಸಾರ್ಟ್‌ನಲ್ಲಿದ್ದ 49 ಮಂದಿಯನ್ನು ಎನ್‌ಡಿಆರ್‌ಎಫ್‌ ರಕ್ಷಿಸಿದೆ. ದೋಣಿ ಹಾಗೂ ಜೀವರಕ್ಷಕ ಜಾಕೆಟ್‌ಗಳ ಮೂಲಕ ಜನರನ್ನು ರಕ್ಷಿಸಲಾಗಿದೆ. ಪಾಲ್ಘರ್‌ ಜಿಲ್ಲೆಯ 16 ಗ್ರಾಮಗಳಲ್ಲಿನ ಜನರನ್ನು ಎನ್‌ಡಿಆರ್‌ಎಫ್‌ ಹಾಗೂ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.

ಬಿಹಾರದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣ ಪಟ್ನಾದ ರಸ್ತೆಗಳು ನೀರಿನಿಂದ ಆವೃತವಾಗಿದ್ದು ಜನರ ಸಂಚಾರಕ್ಕೆ ತೊಡಕಾಗಿದೆ

ಬಿಹಾರದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣ ಪಟ್ನಾದ ರಸ್ತೆಗಳು ನೀರಿನಿಂದ ಆವೃತವಾಗಿದ್ದು ಜನರ ಸಂಚಾರಕ್ಕೆ ತೊಡಕಾಗಿದೆ

–ಪಿಟಿಐ ಚಿತ್ರ

ಪಶ್ಚಿಮ ಬಂಗಾಳ: ಪ್ರವಾಹ ಸ್ಥಿತಿ ನಿರ್ಮಾಣ

ಪಶ್ಚಿಮ ಬಂಗಾಳದಲ್ಲಿ ಸುರಿಯುತ್ತಿರುವ ಮಳೆಯ ಕಾರಣ ರಾಜ್ಯದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಜಲಪಾಇಗುಡಿ ಜಿಲ್ಲೆಯಲ್ಲಿ ಶನಿವಾರದಿಂದ ಭಾನುವಾರದ ಅವಧಿಯಲ್ಲಿ 16.6 ಸೆಂ.ಮೀನಷ್ಟು ಮಳೆಯಾಗಿದೆ. ಜಲಪಾಇಗುಡಿ ನಗರದ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿನ 300 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರಾಜ್ಯದ ಡಾರ್ಜಿಲಿಂಗ್‌ ಜಲಪಾಇಗುಡಿ ಕಲಿಂಪೋಂಗ್‌ ಕೂಛ್‌ಬಿಹಾರ ಹಾಗೂ ಅಲಿಪುರದೌರ್‌ ಜಿಲ್ಲೆಗಳಲ್ಲಿ ಜುಲೈ 12ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ಚಾರ್‌ಧಾಮ್‌ ಯಾತ್ರೆ ತಾತ್ಕಾಲಿಕ ಸ್ಥಗಿತ

ಡೆಹ್ರಾಡೂನ್‌: ಚಾರ್‌ಧಾಮ್‌ ಯಾತ್ರೆಯನ್ನು ಭಾನುವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜುಲೈ 7ಹಾಗೂ 8ರಂದು ಗಢವಾಲ್‌ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯು ನೀಡಿದ ಮುನ್ಸೂಚನೆ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ‘ಜುಲೈ 7ರಿಂದ ರಿಷಿಕೇಶದಿಂದ ಹೊರಡಬೇಕಿದ್ದ ಯಾತ್ರೆಯನ್ನು ಮುಂದೂಡಿ’ ಎಂದು ಗಢವಾಲ್‌ ಆಯುಕ್ತ ವಿನಯ್‌ ಶಂಕರ್‌ ಅವರು ಭಕ್ತರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ತೆರಳಿರುವ ಭಕ್ತರಿಗೆ ಈಗ ಎಲ್ಲಿರುವರೊ ಅಲ್ಲಿಯೇ ಇರುವಂತೆ ಆಯುಕ್ತರು ಸೂಚಿಸಿದ್ದಾರೆ. ವಾತಾವರಣವು ಯಾತ್ರೆಗೆ ಅನುಕೂಲಕರವಾದ ಮೇಲೆ ಯಾತ್ರೆಯನ್ನು ಮುಂದುವರಿಸುವಂತೆ ಸೂಚಿಸಿದ್ದಾರೆ.  ಉತ್ತರಾಖಂಡದಲ್ಲಿ ಭಾರಿ ಮಳೆಯಾಗುತ್ತಿದೆ. ಸೇತುವೆಗಳು ಕುಸಿಯುತ್ತಿವೆ ಹಾಗೂ ಭೂಕುಸಿತ ಸಂಭವಿಸುತ್ತಿದೆ. ಚಮೋಲಿ ಜಿಲ್ಲೆಯ ಛಟ್ವಾಪೀಪಲ್‌ ಪ್ರದೇಶದಲ್ಲಿ ಭಾರಿ ಮಳೆಯ ಕಾರಣ ಬೆಟ್ಟದಿಂದ ಬಂಡೆಗಲ್ಲೊಂದು ರಸ್ತೆಗೆ ಬಿದ್ದು ಬೈಕ್‌ನಲ್ಲಿದ್ದ ಹೈದರಾಬಾದ್‌ನ ಇಬ್ಬರು ಶನಿವಾರ ಮೃತಪಟ್ಟಿದ್ದರು. ಈ ಇಬ್ಬರೂ ಬದರೀನಾಥದಿಂದ ಮರಳುತ್ತಿದ್ದರು. ಜೋಶಿಮಠದ ಸಮೀಪದಲ್ಲಿ ಅಲಕಾನಂದ ನದಿಯು ಉಕ್ಕಿ ಹರಿಯುತ್ತಿದೆ.

ನೀಗಿದ ಜೂನ್‌ನ ಮಳೆ ಕೊರತೆ ಪ್ರಮಾಣ

ನವದೆಹಲಿ: ‘ಜೂನ್‌ ತಿಂಗಳಲ್ಲಿ ಶೇ 11ರಷ್ಟು ಮಳೆ ಕೊರತೆಯಾಗಿತ್ತು. ಆದರೆ ಇತ್ತೀಚೆಗೆ ದೇಶದಾದ್ಯಂತ ಹೆಚ್ಚು ಮಳೆಯಾಗುತ್ತಿರುವ ಕಾರಣ ಈ ಕೊರತೆಯು ನೀಗಿದೆ ಮತ್ತು ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಮುಂದಿನ ಎರಡು–ಮೂರು ದಿನಗಳಲ್ಲಿ ಭಾರತದ ವಾಯವ್ಯ ಹಾಗೂ ಪಶ್ಚಿಮ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಮುನ್ಸೂಚನೆ ನೀಡಿದೆ. ‘ಜೂನ್‌ಯಿಂದ ಇಲ್ಲಿಯವರೆಗೆ ದೇಶದಲ್ಲಿ 21.49 ಸೆಂ.ಮೀ ಮಳೆಯಾಗಿದೆ. ಅಂದರೆ ವಾಡಿಕೆಯ 21.33 ಸೆಂ.ಮೀಗಿಂತ 0.16 ಸೆಂ.ಮೀ. ಹೆಚ್ಚು ಮಳೆಯಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಮಳೆ ಕೊರತೆಯು ನೀಗಿದೆ’ ಎಂದು ಇಲಾಖೆ ಹೇಳಿದೆ. ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಶೇ 13ರಷ್ಟು ಹಾಗೂ ವಾಯುವ್ಯ ಭಾರತದಲ್ಲಿ ವಾಡಿಕೆಗಿಂತ ಶೇ 3ರಷ್ಟು ಅಧಿಕ ಮಳೆಯಾಗಿದೆ. ಪೂರ್ವ ಹಾಗೂ ಈಶಾನ್ಯ ಭಾಗದಲ್ಲಿ ಸುರಿದ ಮಳೆಯು ಶೇ 13ರಷ್ಟು ಕೊರತೆಯನ್ನು ನೀಗಿಸಿದೆ. ಮಧ್ಯ ಭಾರತದಲ್ಲಿನ ಮಳೆಯ ಪ್ರಮಾಣವು ಈ ಭಾಗದ ಶೇ 14ರಷ್ಟಿದ್ದ ಮಳೆ ಕೊರತೆಯನ್ನು ಶೇ 6ಕ್ಕೆ ಇಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT