ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ರಾಜ್ಯಗಳನ್ನು ಅಭಿವೃದ್ಧಿಯತ್ತ ಮುನ್ನಡೆಸಲು ಅಸ್ಸಾಂ ಪಾತ್ರ ಪ್ರಮುಖ: ಮೋದಿ

Last Updated 7 ಫೆಬ್ರುವರಿ 2021, 9:55 IST
ಅಕ್ಷರ ಗಾತ್ರ

ಸೋಂತಿಪುರ (ಅಸ್ಸಾಂ): ‘ಈಶಾನ್ಯ ರಾಜ್ಯಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಅಸ್ಸಾಂ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸಾಮೂಹಿಕ ಪ್ರಯತ್ನಗಳು ಹೇಗೆ ಉತ್ತಮ ಫಲಿತಾಂಶ ನೀಡುತ್ತವೆ ಎಂಬುದಕ್ಕೆ ಅಸ್ಸಾಂ ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಸೋಂತಿಪುರ ಜಿಲ್ಲೆಯ ಧೇಕಿಯಾಜುಲಿಯಲ್ಲಿ ಇಂದು ‘ಅಸೋಂ ಮಾಲಾ’ ಯೋಜನೆಗೆ ಚಾಲನೆ ನೀಡಿದರು. ಇದು ರಾಜ್ಯದ ರಸ್ತೆ ಮೂಲಸೌಕರ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದ್ದು, ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲಿದೆ.ಇದೇವೇಳೆ ಬಿಸ್ವನಾಥ್‌ ಮತ್ತು ಚರೈದೆಯೊದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ‘ಅಸ್ಸಾಂ ಜನರ ಪ್ರೀತಿ ಅತ್ಯಂತ ಆಳವಾದದ್ದಾಗಿದ್ದು, ನನ್ನನ್ನು ಮತ್ತೆ ಇಲ್ಲಿಗೆ ಕರೆತಂದಿದೆ. ನೀವು ಧೇಕಿಯಾಜುಲಿಯನ್ನು ಸಿಂಗರಿಸಿದ ರೀತಿ ತುಂಬಾ ಸುಂದರವಾಗಿದೆ. ನಿಮ್ಮ ಶ್ರಮಕ್ಕೆ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತೇನೆ’ ಎಂದಿದ್ದಾರೆ.

‘ಅಸ್ಸಾಂನ ಸ್ವಾತಂತ್ರ್ಯ ಹೋರಾಟಗಾರರು 1942ರಲ್ಲಿ ದೇಶದ ತ್ರಿವರ್ಣ ಧ್ವಜದ ಗೌರವ ಮತ್ತು ಈ ಪ್ರದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಇಂದು ದೇಶದ ಧೈರ್ಯಶಾಲಿಗಳು ಸ್ವಾತಂತ್ರ್ಯ ಹೋರಾಟಗಾರರಿಂದ ಮತ್ತು ಅವರ ತ್ಯಾಗದಿಂದ ಪ್ರೇರಣೆ ಪಡೆಯುತ್ತಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.

ಐತಿಹಾಸಿಕ ಬೋಡೋ ಒಪ್ಪಂದದ ಬಳಿಕ, ಬೋಡೋ ಪ್ರಾದೇಶಿಕ ಮಂಡಳಿ ಚುನಾವಣೆಗಳು ಈ ಪ್ರದೇಶದಲ್ಲಿ ವಿಶ್ವಾಸ ಮತ್ತು ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘2016ರ ವರೆಗೆ ಅಸ್ಸಾಂನಲ್ಲಿ ಕೇವಲ 6 ವೈದ್ಯಕೀಯ ಕಾಲೇಜುಗಳಿದ್ದವು. ಕಳೆದ 5 ವರ್ಷಗಳಲ್ಲಿ ಇನ್ನೂ 6 ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ನಿಟ್ಟಿನಲ್ಲಿ ಕಾರ್ಯ ಆರಂಭಿಸಿದ್ದೇವೆ. 2016ರ ವರೆಗೆ 725 ಎಂಬಿಬಿಎಸ್‌ ಸೀಟುಗಳಿದ್ದವು. ಹೊಸ ಕಾಲೇಜುಗಳು ಪ್ರಾರಂಭವಾದ ಬಳಿಕ ಅವುಗಳಲ್ಲಿ ಪ್ರತಿವರ್ಷ 1,600 ಹೊಸ ವೈದ್ಯರು ರೂಪುಗೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.

ಮುಂದುವರಿದು, ‘ಪ್ರತಿಯೊಂದು ರಾಜ್ಯದಲ್ಲಿ ಮಾತೃಭಾಷೆಯಲ್ಲಿಯೇ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ನೀಡುವ ಕನಿಷ್ಠ ತಲಾ ಒಂದಾದರೂ ಕಾಲೇಜು ಇರಬೇಕು ಎಂಬುದು ನನ್ನ ಕನಸು. ಶೀಘ್ರದಲ್ಲೇ ರಾಜ್ಯದಲ್ಲಿ ಅಸ್ಸಾಮಿ ಭಾಷೆಯಲ್ಲಿ ಶಿಕ್ಷಣ ನೀಡುವ 1 ವೈದ್ಯಕೀಯ ಮತ್ತು 1 ತಾಂತ್ರಿಕ ಶಿಕ್ಷಣ ಕಾಲೇಜನ್ನು ಕೇಂದ್ರ ಸರ್ಕಾರ ತೆರೆಯಲಿದೆ’ ಎಂದೂ ಭರವಸೆ ನೀಡಿದ್ದಾರೆ.

ಆಯುಷ್ಮಾನ್‌ ಭಾರತ ಯೋಜನೆಯ ಬಗ್ಗೆಯೂ ಮಾತನಾಡಿರುವ ಪ್ರಧಾನಿ, ‘ಅಸ್ಸಾಂನಲ್ಲಿ ಸುಮಾರು 1.5 ಲಕ್ಷ ಬಡವರು ಆಯುಷ್ಮಾನ್‌ ಭಾರತ್ ಯೋಜನೆಯ ಪ್ರಯೋಜನ ಪಡೆದಿದ್ದಾರೆ. 350ಕ್ಕೂ ಆಸ್ಪತ್ರೆಗಳು ಈ ಯೋಜನೆ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಬಡಜನರ ಕೋಟ್ಯಂತರ ರೂಪಾಯಿ ಉಳಿಯಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT