ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ: ಈಶಾನ್ಯದಲ್ಲಿ ಮುಂದುವರಿದ ಪ್ರತಿಭಟನೆ

ಸಿಎಎ ವಿರೋಧಿಸಿ ವಿದ್ಯಾರ್ಥಿ ಸಂಘಟನೆ, ವಿರೋಧ ಪಕ್ಷಗಳ ಹೋರಾಟ
Published 13 ಮಾರ್ಚ್ 2024, 15:33 IST
Last Updated 13 ಮಾರ್ಚ್ 2024, 15:33 IST
ಅಕ್ಷರ ಗಾತ್ರ

ಗುವಾಹಟಿ: ಈಶಾನ್ಯ ಭಾರತದ ಎಂಟು ರಾಜ್ಯಗಳ ಪ್ರಮುಖ ವಿದ್ಯಾರ್ಥಿ ಸಂಘವಾದ ಈಶಾನ್ಯ ವಿದ್ಯಾರ್ಥಿಗಳ ಸಂಘಟನೆ (ಎನ್‌ಇಎಸ್‌ಒ) ನೇತೃತ್ವದಲ್ಲಿ ಬುಧವಾರ ಪೌರತ್ವ ತಿದ್ದುಪಡಿ ಕಾಯ್ದೆ‌ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನಾನಿರತರು ಸಿಎಎ ನಿಯಮಗಳ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಕಾಯ್ದೆಯನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿದರು. 

ರಾಯಜೋರ್‌ ದಳ, ಬೀರ್‌ ಲಾಚಿತ್‌ ಸೇನಾ ಮತ್ತು ಕೃಷಕ್‌ ಮುಕ್ತಿ ಸಂಗ್ರಾಮ ಸಮಿತಿ ಸದಸ್ಯರು ಶಿವಸಾಗರದಲ್ಲಿ ಮೆರವಣಿಗೆ ಆಯೋಜಿಸಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆದಾಗ, ಪ್ರತಿಭಟನಾನಿರತರು ಮತ್ತು ಪೊಲೀಸರು ನಡುವೆ ಸಣ್ಣ ಪ್ರಮಾಣದಲ್ಲಿ ಘರ್ಷಣೆ ನಡೆಯಿತು. ‌ಪ್ರತಿಭಟನೆ ನಡೆಸುತ್ತಿದ್ದ ಕೆಲ ಮುಖಂಡರನ್ನು ಪೊಲೀಸರು ಬಂಧಿಸಿದರು. 

ಕಾಂಗ್ರೆಸ್‌, ರಾಯಜೋರ್‌ ದಳ, ಅಸ್ಸಾಂ ಜಾತೀಯತಾವಾದಿ ಪರಿಷತ್‌, ಎಡ ಪಕ್ಷಗಳು ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿವೆ.

ಸತ್ಯಾಗ್ರಹಕ್ಕೆ ಕರೆ: ಸಿಎಎ ಅನುಷ್ಠಾನ ವಿರೋಧಿಸಿ ಆಲ್‌ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ (ಎಎಎಸ್‌ಯು) ರಾಜ್ಯದಾದ್ಯಂತ ಸತ್ಯಾಗ್ರಹ ಆರಂಭಿಸಲು ಬುಧವಾರ ಕರೆ ನೀಡಿದೆ.

ಸಿಎಎ ಕಾಯ್ದೆ ಮತ್ತು ನಿಯಮಗಳ ಪ್ರತಿಯನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಗುರುವಾರ ಸುಟ್ಟು ಪ್ರತಿಭಟಿಸಲಾಗುವುದು ಎಂದು ತೃಣಮೂಲ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ರಿಪುನ್‌ ಬೋರಾ ತಿಳಿಸಿದ್ದಾರೆ.

ಬಿಗಿ ಭದ್ರತೆ: ದಿನೇ ದಿನೇ ಪ್ರತಿಭಟನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ರಾಜ್ಯದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಮಾಂಡೊಗಳು ಸೇರಿದಂತೆ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿ ಮತ್ತು ಜನರ ಜೀವಕ್ಕೆ ಹಾನಿ ಆಗದಂತೆ ನೋಡಿಕೊಳ್ಳಬೇಕು ಎಂದು ಪ್ರತಿಭಟನೆ ನಡೆಸುವವರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

‘ಸಂವೇದನೆಯಿಂದ ಮತ ಚಲಾಯಿಸಿ’ (ಶ್ರೀನಗರ ವರದಿ): ಸಿಎಎ ರೀತಿಯ ಕಾನೂನುಗಳಿಗೆ ಪ್ರತಿಕ್ರಿಯಿಸಲು ತಮ್ಮ ಮತಗಳನ್ನು ಸಂವೇದನಾಶೀಲವಾಗಿ ಬಳಸಬೇಕು ಎಂದು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಅಧ್ಯಕ್ಷ ಮೆಹಬೂಬಾ ಮುಫ್ತಿ ಬುಧವಾರ ದೇಶದ ಜನರಲ್ಲಿ ಮನವಿ ಮಾಡಿದರು.

ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ತನ್ನ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಸಿಎಎ ನಿಯಮಗಳ ಅಧಿಸೂಚನೆ ಹೊರಡಿಸಿದೆ ಎಂದರು. ದೇಶದಲ್ಲಿ ಕೋಮು ಘರ್ಷಣೆ ಪ್ರಾರಂಭಿಸಲು ಬಿಜೆಪಿ ಎಲ್ಲ ತಂತ್ರಗಳನ್ನು ಬಳಸುತ್ತಿದೆ ಎಂದು ಅವರು ದೂರಿದರು. 

‘ಅವರು ಮಸೀದಿಗಳನ್ನು ಕೆಡವಿದರು, ಪ್ರತಿ ಮಸೀದಿಗಳಲ್ಲಿ ವಿಗ್ರಹಗಳನ್ನು ಹುಡುಕಿದರು, ಮದರಸಾಗಳನ್ನು ಮತ್ತು ರ‍್ಯಾಟ್‌ ಹೋಲ್‌ ಕಾರ್ಮಿಕರ ಮನೆಗಳನ್ನು ಕೆಡವಿದರು, ನಮಾಜ್‌ ಮಾಡುವವರನ್ನು ಒದ್ದು, ಅಗೌರವಿಸಿದರು. ಇಷ್ಟೆಲ್ಲ ಆದರೂ ಮುಸ್ಲಿಮರು ಶಾಂತಿಯಿಂದ ಇರುವುದನ್ನು ನೋಡಿ, ಇದೀಗ ಸಿಎಎ ಅಸ್ತ್ರ ಬಳಸಿದ್ದಾರೆ’ ಎಂದು ಮುಫ್ತಿ ಆರೋಪಿಸಿದರು.

ಬಿಜೆಪಿ ಈ ರೀತಿಯ ಯತ್ನಗಳಿಗೆ ಬಲಿಯಾಗದೇ ಶಾಂತಿ ಕಾಯ್ದುಕೊಳ್ಳಿ ಎಂದು ಅವರು ಮುಸ್ಲಿಮರಲ್ಲಿ ಮನವಿ ಮಾಡಿದರು.

‘ತಪ್ಪು ಮಾಹಿತಿ ನೀಡಬೇಡಿ’ (ನವದೆಹಲಿ ವರದಿ): ವಿರೋಧ ಪಕ್ಷಗಳು ಸಿಎಎ ಕುರಿತು ತಪ್ಪು ಮಾಹಿತಿ ನೀಡುವ ಮೂಲಕ ಜನರ ಕೋಮು ಭಾವನೆಯನ್ನು ಪ್ರಚೋದಿಸುತ್ತಿವೆ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.

‘ಸಿಎಎ ಯಾವುದೇ ರೀತಿಯಲ್ಲೂ ಭಾರತೀಯರ ಪೌರತ್ವ ಅಥವಾ ಉದ್ಯೋಗವನ್ನು ಕಸಿದುಕೊಳ್ಳುವುದಿಲ್ಲ’ ಎಂದು ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಪ್ರತಿಕ್ರಿಯಿಸಿದ್ದಾರೆ.

ಸಿಎಎ ವಿರೋಧಿಸಿ ಆಲ್‌ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟದ (ಎಎಎಸ್‌ಯು) ಸದಸ್ಯರು ಬುಧವಾರ ಅಸ್ಸಾಂನ ಸೋನಿತ್‌ಪುರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು  –ಪಿಟಿಐ ಚಿತ್ರ
ಸಿಎಎ ವಿರೋಧಿಸಿ ಆಲ್‌ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟದ (ಎಎಎಸ್‌ಯು) ಸದಸ್ಯರು ಬುಧವಾರ ಅಸ್ಸಾಂನ ಸೋನಿತ್‌ಪುರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು  –ಪಿಟಿಐ ಚಿತ್ರ

ಕೇಂದ್ರದ್ದು ‘ಕೊಳಕು ಮತಬ್ಯಾಂಕ್‌ ರಾಜಕೀಯ’– ಕೇಜ್ರಿವಾಲ್ ‌

ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ ಸಿಎಎ ಅನುಷ್ಠಾನವು ಬಿಜೆಪಿಯ ‘ಕೊಳಕು ಮತಬ್ಯಾಂಕ್‌ ರಾಜಕೀಯ’ ಆಗಿದ್ದು ಈ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂಬುದು ಜನರ ಅಪೇಕ್ಷೆಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದರು. ‘ಕೇಂದ್ರದ ಬಿಜೆಪಿ ಸರ್ಕಾರವು ಈ ಕಾಯ್ದೆ ಮೂಲಕ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಹೆಚ್ಚಿನ ಸಂಖ್ಯೆಯ ಬಡ ಅಲ್ಪಸಂಖ್ಯಾತರಿಗೆ ಭಾರತದ ಬಾಗಿಲು ತೆರೆದಿದೆ’ ಎಂದು ಅವರು ದೂರಿದರು. ‘ಸಿಎಎ ಅನುಷ್ಠಾನದ ಬಳಿಕ ಪಕ್ಕದ ರಾಷ್ಟ್ರಗಳ 1.5 ಕೋಟಿ ಅಲ್ಪಸಂಖ್ಯಾತರು ಭಾರತಕ್ಕೆ ಬಂದರೂ ಅಪಾಯಕಾರಿ ಪರಿಸ್ಥಿತಿ ಉಂಟಾಗುತ್ತದೆ. ಅದು 1947ಕ್ಕಿಂತಲೂ ದೊಡ್ಡ ವಲಸೆಯಾಗಲಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಅತ್ಯಾಚಾರ ಮತ್ತು ದರೋಡೆಗಳು ಹೆಚ್ಚಾಗಬಹುದು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.  ‘ಪಾಕ್‌ ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ 3.5 ಕೋಟಿ ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಭಾರತದಲ್ಲಿ ಮನೆ ಉದ್ಯೋಗ ಕಲ್ಪಿಸುವ ಮೂಲಕ ಕೇಂದ್ರ ಸರ್ಕಾರವು ನಮ್ಮ ಜನರ ಹಣವನ್ನು ಖರ್ಚು ಮಾಡಲು ಬಯಸುತ್ತಿದೆ’ ಎಂದು ಅವರು ಆರೋಪಿಸಿದರು. ‘ಪಕ್ಕದ ದೇಶದ ಅಲ್ಪಸಂಖ್ಯಾತರು ಭಾರತಕ್ಕೆ ಬರುವುದರಿಂದ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಲಾಭವಾಗಲಿದೆ’ ಎಂದು ಅವರು ದೂರಿದರು. ಇಡೀ ದೇಶ ಸಿಎಎ ರದ್ದಾಗಬೇಕು ಎಂದು ಒತ್ತಾಯಿಸುತ್ತಿದೆ. ಈ ಕಾನೂನನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ ಜನರು ಬಿಜೆಪಿ ವಿರುದ್ಧ ಮತ ಚಲಾಯಿಸಿ ಎಂದು ಅವರು ಕರೆ ನೀಡಿದರು.

ಬಿಜೆಪಿ ತಿರುಗೇಟು: ನೆರೆಹೊರೆ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಸಿಎಎ ಆಶ್ರಯ ನೀಡುವ ಶಾಸನವಾಗಿದ್ದು ಅದು ಯಾರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಇದು ದೆಹಲಿ ಮುಖ್ಯಮಂತ್ರಿಗೆ ಅರ್ಥವಾಗುತ್ತಿಲ್ಲ ಎಂದು ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT