ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು: ಮತ ಎಣಿಕೆಗೆ ಕ್ಷಣಗಣನೆ

ಲೋಕಸಭಾ ಚುನಾವಣೆಗೆ ಮುನ್ನ ‘ಸೆಮಿಫೈನಲ್‌’ ಫಲಿತಾಂಶಕ್ಕೆ ಕ್ಷಣಗಣನೆ
Published 3 ಡಿಸೆಂಬರ್ 2023, 0:54 IST
Last Updated 3 ಡಿಸೆಂಬರ್ 2023, 0:54 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಗೆ ಮುಂಚಿನ ‘ಸೆಮಿಫೈನಲ್‌’ ಎಂದೇ ಪರಿಗಣಿಸಲಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭಾನುವಾರ ನಡೆಯಲಿದೆ.

ಈ ಫಲಿತಾಂಶವು ಬಿಜೆಪಿ ಹಾಗೂ ಅದರ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನೂ ಹೊರಹಾಕಲಿದೆ. ‘ಫೈನಲ್‌’ ಹಣಾಹಣಿಯ ರಣತಂತ್ರಗಳ ದಿಕ್ಕನ್ನು ಸಹ ಈ ಫಲಿತಾಂಶ ನಿರ್ಧರಿಸಲಿದೆ ಎಂದು ವ್ಯಾಖ್ಯಾನಿಸಲಾಗಿದೆ. 

ನವೆಂಬರ್‌ 7ರಿಂದ 30ರ ಅವಧಿಯಲ್ಲಿ ಐದು ರಾಜ್ಯಗಳಿಗೆ ಚುನಾವಣೆ ನಡೆದಿತ್ತು. ಮಿಜೋರಾಂನಲ್ಲಿ ಮಾತ್ರ ಮತ ಎಣಿಕೆ ಸೋಮವಾರ ನಡೆಯಲಿದೆ. ಡಿ.3ರಂದು ನಿಗದಿಯಾಗಿರುವ ಮತ ಎಣಿಕೆಯನ್ನು ಬೇರೆ ದಿನಕ್ಕೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಮಿಜೋರಾಂನ ಎನ್‌ಜಿಒ ಕೋ ಆರ್ಡಿನೇಷನ್‌ ಕಮಿಟಿ ರಾಜ್ಯದಾದ್ಯಂತ ಶುಕ್ರವಾರ ಪ್ರತಿಭಟನೆ ನಡೆಸಿತ್ತು. ಹೀಗಾಗಿ, ಸೋಮವಾರ ಮತ ಎಣಿಕೆ ನಡೆಸಲು ಆಯೋಗ ತೀರ್ಮಾನಿಸಿದೆ. 

ಮತಗಟ್ಟೆ ಸಮೀಕ್ಷೆ ಪ್ರಕಾರ, 90 ಸ್ಥಾನಗಳನ್ನು ಹೊಂದಿರುವ ಛತ್ತೀಸಗಢದಲ್ಲಿ ಕಾಂಗ್ರೆಸ್‌ ಸ್ಪಷ್ಟ ಮೇಲುಗೈ ಸಾಧಿಸಿದ್ದು, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 119 ಸ್ಥಾನಗಳನ್ನು ಹೊಂದಿರುವ ತೆಲಂಗಾಣದಲ್ಲಿ ಬಿಆರ್‌ಎಸ್‌ ಅನ್ನು ಕಾಂಗ್ರೆಸ್‌ ಅಧಿಕಾರದಿಂದ ಕೆಳಗಿಳಿಸಲಿದೆ ಎಂದೂ ಸಮೀಕ್ಷೆಗಳು ಹೇಳಿವೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದ್ದು, ಮತ ಎಣಿಕೆಯ ಕೊನೆಯ ಕ್ಷಣದವರೆಗೂ ಜಿದ್ದಾಜಿದ್ದಿ ಮುಂದುವರಿಯಬಹುದು. ಈ ರಾಜ್ಯಗಳಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆಯೂ ಇದೆ ಎಂದು ಸಮೀಕ್ಷೆಗಳು ಹೇಳಿವೆ. ಈ ಎರಡೂ ರಾಜ್ಯಗಳ ಫಲಿತಾಂಶದ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ. ಎರಡೂ ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸದೆಯೇ ಬಿಜೆಪಿ ಚುನಾವಣೆ ಎದುರಿಸಿದೆ. 

230 ಸದಸ್ಯರ ಬಲಾಬಲದ ಮಧ್ಯಪ್ರದೇಶದಲ್ಲಿ 19 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತ ವಿರೋಧಿ ಅಲೆ ಹಾಗೂ ಗ್ಯಾರಂಟಿಗಳ ಘೋಷಣೆಯು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡಲಿದೆ ಎಂದು ಆ ಪಕ್ಷದ ನಾಯಕರು ಭಾವಿಸಿದ್ದರು.

ಯಾರ ವರ್ಚಸ್ಸು ಎಷ್ಟು?
ಈ ಫಲಿತಾಂಶವು ಕಮಲನಾಥ್‌, ಅಶೋಕ್‌ ಗೆಹಲೋತ್‌, ಭೂಪೇಶ್‌ ಬಘೆಲ್‌, ಎ. ರೇವಂತ್ ರೆಡ್ಡಿ (ಎಲ್ಲ ಕಾಂಗ್ರೆಸ್‌ ನಾಯಕರು), ಶಿವರಾಜ ಸಿಂಗ್‌ ಚೌಹಾಣ್‌, ನರೇಂದ್ರ ಸಿಂಗ್‌ ತೋಮರ್‌, ವಸುಂಧರಾ ರಾಜೇ ಸಿಂಧಿಯಾ, ರಮಣ್ ಸಿಂಗ್‌ (ಎಲ್ಲ ಬಿಜೆಪಿ ನಾಯಕರು) ಹಾಗೂ ಕೆ.ಚಂದ್ರಶೇಖರ್ ರಾವ್‌ (ಬಿಆರ್‌ಎಸ್‌) ಅವರ ವರ್ಚಸ್ಸು ಎಷ್ಟಿದೆ ಎಂಬುದನ್ನು ತೋರಿಸಿಕೊಡಲಿದೆ.

ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಮಾಹಿತಿ ಸಿಕ್ಕ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿಯ ರಾಷ್ಟ್ರೀಯ ನಾಯಕರು ರಣತಂತ್ರ ಬದಲಿಸಿದ್ದರು. ಹೀಗಾಗಿ, ಇಲ್ಲಿ ನಿಕಟ ಸ್ಪರ್ಧೆ ಏರ್ಪಟ್ಟಿದೆ. ‘ಇಂಡಿಯಾ’ ಕೂಟದ ಪಾಲುದಾರ ಪಕ್ಷವಾದ ಸಮಾಜವಾದಿ ಪಕ್ಷ ಪಡೆಯುವ ಮತಗಳು ನಿರ್ಣಾಯಕ ಎಂದು ಸಮೀಕ್ಷೆಗಳು ತಿಳಿಸಿವೆ. 

ರಾಜಸ್ಥಾನದ ಮತದಾರರು ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವ ಸಂಪ್ರದಾಯವನ್ನು 25 ವರ್ಷಗಳಿಂದ ಅನುಸರಿಸಿಕೊಂಡು ಬಂದಿದ್ದಾರೆ. ಈ ‘ಸಂಪ್ರದಾಯ’ ಈ ಸಲ ಮುರಿಯಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 

ರಾಜಸ್ಥಾನದಲ್ಲಿ ಗೆಲ್ಲುವ ವಿಶ್ವಾಸವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ. ಆದರೆ, ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರು ಬಹುಮತ ಗಳಿಸುವ ವಿಶ್ವಾಸ ಹೊಂದಿದ್ದಾರೆ. ಕೈ ಹಾಗೂ ಕಮಲ ಪಾಳಯಗಳು ಪಕ್ಷೇತರ ಹಾಗೂ ಭಾರತೀಯ ಆದಿವಾಸಿ ಪಕ್ಷದಂತಹ ಸಣ್ಣ ಪಕ್ಷಗಳ ಸಂಭವನೀಯ ವಿಜೇತರ ಜತೆಗೆ ಸಂಪರ್ಕದಲ್ಲಿವೆ. 

638 ಕ್ಷೇತ್ರ, 7,643 ಅಭ್ಯರ್ಥಿಗಳು
ನಾಲ್ಕು ರಾಜ್ಯಗಳ 638 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 7,643 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರ ಭವಿಷ್ಯ ಭಾನುವಾರ ನಿರ್ಧಾರವಾಗಲಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಈ ರಾಜ್ಯಗಳು ಒಟ್ಟಾಗಿ 82 ಲೋಕಸಭಾ ಸ್ಥಾನಗಳನ್ನು ಹೊಂದಿವೆ. ಈ ಕ್ಷೇತ್ರಗಳ ಪೈಕಿ, 2019ರ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಜಯಿಸಿದ್ದವು. ಉಳಿದ ಸ್ಥಾನಗಳು ಪ್ರಾದೇಶಿಕ ಪಕ್ಷಗಳ ಪಾಲಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT