ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ | ಶಿಕ್ಷಕರ ನೇಮಕ ಹಗರಣ: ₹ 365 ಕೋಟಿ ಮೌಲ್ಯದ ಆಸ್ತಿ ಜಪ್ತಿ

Published 12 ಏಪ್ರಿಲ್ 2024, 15:37 IST
Last Updated 12 ಏಪ್ರಿಲ್ 2024, 15:37 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಲ್ಲಿಯವರೆಗೆ ₹365 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ತಿಳಿಸಿದೆ.

ಸಹಾಯಕ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ (ಡಬ್ಲ್ಯುಬಿಎಸ್‌ಎಸ್‌ಸಿ) ಮಾಜಿ ಸಲಹೆಗಾರ ಸಂತಿ ಪ್ರಸಾದ್‌ ಸಿನ್ಹಾ ಮತ್ತು ಪ್ರಮುಖ ಮಧ್ಯವರ್ತಿ ಪ್ರಸನ್ನ ಕುಮಾರ್‌ ರಾಯ್‌ ಅವರ ಹೆಸರಿನಲ್ಲಿದ್ದ ₹230 ಕೋಟಿ ಮೌಲ್ಯದ ಜಮೀನು ಮತ್ತು ಫ್ಲಾಟ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ ತಿಳಿಸಿದೆ. ಈ ಇಬ್ಬರನ್ನು ಇ.ಡಿ ಬಂಧಿಸಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದಲ್ಲದೆ, ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರದ ಮತ್ತೊಂದು ಪ್ರಕರಣದಲ್ಲಿ ಇಲ್ಲಿಯವರೆಗೆ ₹135 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ. ಈ ಎರಡೂ ಪ್ರಕರಣಗಳಲ್ಲಿ ಜಪ್ತಿ ಮಾಡಿರುವ ಒಟ್ಟಾರೆ ಆಸ್ತಿಯ ಮೌಲ್ಯ ₹365.60 ಕೋಟಿ ಆಗುತ್ತದೆ ಎಂದು ಅದು ಹೇಳಿದೆ.

ಶಿಕ್ಷಕರ ನೇಮಕಾತಿ ಪ್ರಕರಣ ಕುರಿತು ಸಿಬಿಐ ಆರಂಭದಲ್ಲಿ ಎಫ್‌ಐಆರ್‌ ದಾಖಲಿಸಿದ್ದು, ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಅದರ ಪ್ರಕಾರ, ಒಟ್ಟು 2,081 ಅಭ್ಯರ್ಥಿಗಳ ನೇಮಕಾತಿಯಲ್ಲಿ ಡಬ್ಲ್ಯುಬಿಎಸ್‌ಎಸ್‌ಸಿ ಅಧಿಕಾರಿಗಳು ಕ್ರಿಮಿನಲ್‌ ಪಿತೂರಿ ನಡೆಸಿ, ಶಿಕ್ಷಕರ ಹುದ್ದೆಗೆ ಅಕ್ರಮವಾಗಿ ನೇಮಕ ಮಾಡಿದ್ದಾರೆ ಅಥವಾ ಶಿಫಾರಸು ಮಾಡಿದ್ದಾರೆ ಎಂದು ಇ.ಡಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT