ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲ ಪ್ರದೇಶ: ಹಿಂತಿರುಗಲ್ಲ, 9 ಶಾಸಕರು ಸಂಪರ್ಕದಲ್ಲಿದ್ದಾರೆ- ಅನರ್ಹ MLA ರಾಣಾ

Published 2 ಮಾರ್ಚ್ 2024, 13:22 IST
Last Updated 2 ಮಾರ್ಚ್ 2024, 13:22 IST
ಅಕ್ಷರ ಗಾತ್ರ

ಶಿಮ್ಲಾ: ‘ಕೆಲವು ಬಂಡಾಯ ಶಾಸಕರು ಹಿಂತಿರುಗಲು ಬಯಸಿದ್ದಾರೆ’ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖು ಹೇಳಿಕೆಯನ್ನು, ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರಾಜೇಂದ್ರ ರಾಣಾ ಅವರು ಅಲ್ಲಗಳೆದಿದ್ದು, ಪಕ್ಷದ ಕನಿಷ್ಠ ಒಂಬತ್ತು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶನಿವಾರ ಪ್ರತಿಪಾದಿಸಿದರು.

ಸುಖು ಅವರು ತಮ್ಮ ಹೇಳಿಕೆಗಳಿಂದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ, ನಂತರ ವಿಧಾನಸಭೆಯಿಂದ ಅನರ್ಹಗೊಂಡ ಆರು ಕಾಂಗ್ರೆಸ್‌ ಶಾಸಕರಲ್ಲಿ ರಾಜೇಂದ್ರ ರಾಣಾ ಅವರು ಒಬ್ಬರು.

‘ಯಾರೊಬ್ಬರು ಹಿಂತಿರುಗಲು ಬಯಸಿಲ್ಲ’ ಎಂದು ರಾಣಾ ತಿಳಿಸಿದರು.

ಜನರ ಗೌರವಕ್ಕಾಗಿ ಈ ನಿರ್ಧಾರ:

‘ಹಿಮಾಚಲ ಪ್ರದೇಶ ಮತ್ತು ರಾಜ್ಯದ ಜನರ ಗೌರವವನ್ನು ಎತ್ತಿಹಿಡಲು ನಾವು ಈ ನಿರ್ಧಾರ ತೆಗೆದುಕೊಂಡೆವು’ ಎಂದು ರಾಣಾ ಅವರು ಅಡ್ಡಮತದಾನದ ಕುರಿತು ಪ್ರತಿಕ್ರಿಯಿಸಿದರು.

‘ಈ ಸ್ಥಾನಕ್ಕೆ ಸ್ಪರ್ಧಿಸಲು ರಾಜ್ಯದಿಂದ ಯಾರೊಬ್ಬರೂ ಕಾಂಗ್ರೆಸ್‌ಗೆ ದೊರೆಯಲಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಅಭಿಷೇಕ್‌ ಮನು ಸಿಂಘ್ವಿ ಬದಲಿಗೆ ಸೋನಿಯಾ ಗಾಂಧಿ ಅವರು ಸ್ಪರ್ಧಿಸಿದ್ದರೆ ಅಡ್ಡ ಮತದಾನದ ಸಾಧ್ಯತೆ ಇತ್ತೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಣಾ, ‘ಸೋನಿಯಾ ಅವರು ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದವರು. ಅವರು ಇಲ್ಲಿಂದ ಸ್ಪರ್ಧಿಸಿದ್ದರೆ ಅದರ ವಿಷಯವೇ ಬೇರೆ ಆಗುತ್ತಿತ್ತು’ ಎಂದರು.

ಅನರ್ಹರ ಜತೆ ಚರ್ಚಿಸಿರುವೆ– ಸುಖು:

ಮತ್ತೊಂದೆಡೆ ಸುಖು ಅವರು, ‘ಕಾಂಗ್ರೆಸ್‌ನ ಶೇ 80ರಷ್ಟು ಶಾಸಕರು ಒಟ್ಟಿಗೆ ಇದ್ದೇವೆ. ಉಳಿದವರು ಕ್ಷುಲ್ಲಕ ವಿಷಯಗಳ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಅದನ್ನು ಸರಿಪಡಿಸುವ ಜವಾಬ್ದಾರಿ ನನ್ನದು. ಹೀಗಾಗಿ ಅನರ್ಹಗೊಂಡಿರುವ ಆರು ಜನರ ಜತೆಗೂ ಮಾತುಕತೆ ನಡೆಸಿದ್ದು, ಸಮನ್ವಯ ಸಮಿತಿ ರಚನೆಯಾದ ಬಳಿಕ ಪರಿಸ್ಥಿತಿ ಸುಧಾರಿಸಲಿದೆ’ ಎಂದು ಹೇಳಿದರು.

ಆತ್ಮಸಾಕ್ಷಿಯಂತೆ ನಡೆದಿದ್ದೇವೆ:

ಅನರ್ಹಗೊಂಡಿರುವ ಮತ್ತೊಬ್ಬ ಕಾಂಗ್ರೆಸ್ಸಿಗ ಇಂದರ್‌ ದತ್ ಲಖನ್‌ಪಾಲ್‌, ‘ನಮ್ಮನ್ನು ಕೆಲವರು ಬಂಡಾಯ ಎದ್ದವರು ಅಥವಾ ದ್ರೋಹಿಗಳು ಎಂದು ಕರೆಯುತ್ತಾರೆ. ಆದರೆ, ನಾವು ನಮ್ಮ ಆತ್ಮಸಾಕ್ಷಿಯನ್ನು ಕೇಳಿದ್ದೇವೆ. ಇದು ನಮ್ಮ ವೈಯಕ್ತಿಕ ನಿರ್ಧಾರ’ ಎಂದರು.

ತಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಅನರ್ಹ ಶಾಸಕರೊಬ್ಬರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT