ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವರ ಭೇಟಿಗೆ ಡೆಪ್ಯುಟಿ ಹೈಕಮಿಷನರ್‌ಗೆ ಅಡ್ಡಿ: ಟಿಎಂಸಿ ಆರೋಪ

Published 19 ಜೂನ್ 2024, 16:22 IST
Last Updated 19 ಜೂನ್ 2024, 16:22 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾದ ಡೆಪ್ಯುಟಿ ಹೈಕಮಿಷನರ್‌ ಅವರಿಗೆ ಪಶ್ಚಿಮ ಬಂಗಾಳದ ಮೂವರು ಸಚಿವರನ್ನು ಭೇಟಿ ಮಾಡದೆ ಇರುವಂತೆ ಶಿಫಾರಸು ಮಾಡಲಾಗಿದೆ, ರಾಜ್ಯವು ವಿದೇಶಿ ಬಂಡವಾಳ ತರುವುದಕ್ಕೆ ಕೇಂದ್ರ ಸರ್ಕಾರವು ಅಡ್ಡಿ ಸೃಷ್ಟಿಸುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. 

ಪಶ್ಚಿಮ ಬಂಗಾಳದ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವ ಶಶಿ ಪಂಜಾ, ಐ.ಟಿ. ಸಚಿವ ಬಾಬುಲ್ ಸುಪ್ರಿಯೊ ಮತ್ತು ಕೃಷಿ ಸಚಿವ ಸೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ಭೇಟಿಯಾಗಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಡೆಪ್ಯುಟಿ ಹೈಕಮಿಷನರ್ ನಿಕೊಲಾಸ್ ಮಕಾಫ್ರೀ ಅವರಿಗೆ ಶಿಫಾರಸು ಮಾಡಿದೆ ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಡೆಪ್ಯುಟಿ ಹೈಕಮಿಷನರ್‌ ಅವರು ಈ ಮೂವರು ಸಚಿವರನ್ನು ಭೇಟಿ ಮಾಡಲು ಬಯಸಿದ್ದಾರೆ ಎಂಬ ಸಂದೇಶವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಲಭಿಸಿತ್ತು. ಇದಾದ ನಂತರ, ಡೆಪ್ಯುಟಿ ಹೈಕಮಿಷನರ್‌ ಅವರು ಈ ಸಚಿವರನ್ನು ಭೇಟಿ ಮಾಡುವುದನ್ನು ಸಚಿವಾಲಯವು ಶಿಫಾರಸು ಮಾಡುವುದಿಲ್ಲ ಎಂಬ ಸಂದೇಶ ಬಂತು’ ಎಂದು ಗೋಖಲೆ ಹೇಳಿದರು.

‘ಇಲ್ಲಿ ಪ್ರಶ್ನೆ ಬಹಳ ಸರಳವಾಗಿದೆ. ರಾಜತಾಂತ್ರಿಕ ವ್ಯಕ್ತಿಯೊಬ್ಬರು ಭಾರತದ ಒಂದು ರಾಜ್ಯದ ಸಂಪುಟ ದರ್ಜೆ ಸಚಿವರ ಜೊತೆ ಮಾತುಕತೆ ನಡೆಸಿದರೆ ಎನ್‌ಡಿಎ ಸರ್ಕಾರಕ್ಕೆ ಏನು ಸಮಸ್ಯೆ’ ಎಂದು ಅವರು ಪ್ರಶ್ನಿಸಿದರು.

ಆಸ್ಟ್ರೇಲಿಯದ ಡೆಪ್ಯುಟಿ ಹೈಕಮಿಷನರ್‌ ಅವರಿಗೆ ದಿಲೀಪ್ ಘೋಷ್, ಸುಕಾಂತ ಮಜುಂದಾರ್, ಡೆರೆಕ್ ಒ‘ಬ್ರಯಾನ್ ಮತ್ತು ಜವಾಹರ ಸರ್ಕಾರ್ ಅವರನ್ನು ಭೇಟಿ ಮಾಡಲು ಆಕ್ಷೇಪ ಇಲ್ಲ ಎಂಬ ಸಂದೇಶ ರವಾನಿಸಲಾಯಿತು. ಆದರೆ ಈ ಮೂವರು ಸಚಿವರನ್ನು ಭೇಟಿ ಮಾಡುವುದರ ವಿರುದ್ಧ ಶಿಫಾರಸು ಮಾಡಲಾಯಿತು ಎಂದು ಮೂಲಗಳು ಹೇಳಿವೆ.

ಈ ವಿಚಾರವನ್ನು ಎನ್‌ಡಿಎ ಮೈತ್ರಿಕೂಟದ ಇತರ ಪಕ್ಷಗಳ ಜೊತೆಯೂ ಚರ್ಚಿಸಲಾಗುತ್ತದೆ ಹಾಗೂ ಇದನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದು ಗೋಖಲೆ ತಿಳಿಸಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಒಂದಕ್ಕಿಂತ ಹೆಚ್ಚಿನ ಸಂದರ್ಭಗಳಲ್ಲಿ ವಿದೇಶ ಪ್ರವಾಸಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಕೂಡ ಗೋಖಲೆ ದೂರಿದರು.

ಷೇರುಪೇಟೆ: ತನಿಖೆಗೆ ಒತ್ತಾಯ

ಮತದಾನೋತ್ತರ ಸಮೀಕ್ಷೆಗಳ ಮೂಲಕ ಷೇರುಪೇಟೆಯ ಮೇಲೆ ಪ್ರಭಾವ ಬೀರಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ಆಗಬೇಕು ಎಂದು ಗೋಖಲೆ ಹಾಗೂ ಪಕ್ಷದ ನಾಯಕಿ ಸಾಗರಿಕಾ ಘೋಷ್ ಆಗ್ರಹಿಸಿದ್ದಾರೆ.

‘ಇದು ಬಿಜೆಪಿ ನಡೆಸಿದ, ಷೇರುಪೇಟೆ ಮೇಲೆ ಪ್ರಭಾವ ಬೀರಿದ ಹಗರಣ. ಇದರ ಬಗ್ಗೆ ತನಿಖೆ ನಡೆಸಲಿಲ್ಲ ಎಂದಾದರೆ ದೇಶದ ಜನರಿಗೆ ಅಪಕಾರ ಮಾಡಿದಂತೆ ಆಗುತ್ತದೆ. ಭಾರತದ ಹೂಡಿಕೆದಾರರ ರಕ್ಷಣೆಯ ಪರವಾಗಿ ನಾವು ನಿಲ್ಲುತ್ತೇವೆ’ ಎಂದು ಗೋಖಲೆ ಹೇಳಿದರು.

ಈ ವಿಚಾರವನ್ನು ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದರು.

ಷೇರುಪೇಟೆ ವಿಚಾರವಾಗಿ ಇದೇ ಬಗೆಯ ಆರೋಪಗಳನ್ನು ‘ಇಂಡಿಯಾ’ ಮೈತ್ರಿಕೂಟದ ಇತರ ಕೆಲವು ಪಕ್ಷಗಳೂ ಮಾಡಿವೆ. ಆರೋಪಗಳು ಆಧಾರರಹಿತ ಎಂದು ಬಿಜೆಪಿ ಈಗಾಗಲೇ ಪ್ರತಿಕ್ರಿಯೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT