ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ವಿಮಾನ ನಿಲ್ದಾಣದ ಉದ್ಘಾಟನೆ ಭಾರತಕ್ಕೆ ಐತಿಹಾಸಿಕ ದಿನ: ಸಚಿವ ಸಿಂಧಿಯಾ

Published 29 ಡಿಸೆಂಬರ್ 2023, 10:30 IST
Last Updated 29 ಡಿಸೆಂಬರ್ 2023, 10:30 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆ ವಿಮಾನ ನಿಲ್ದಾಣ ನಾಳೆ ಉದ್ಘಾಟನೆಗೊಳ್ಳಲಿದ್ದು, ದೇಶಕ್ಕೆ ಐತಿಹಾಸಿಕ ದಿನವಾಗಲಿದೆ ಎಂದು ನಾಗರಿಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಶನಿವಾರ) ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣವನ್ನು 6,500 ಚದರ ಮೀಟರ್‌ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ.

ಎರಡನೇ ಹಂತದ ಯೋಜನೆಯಲ್ಲಿ ವಿಮಾನ ನಿಲ್ದಾಣದ ವಿಸ್ತೀರ್ಣವು 6,500 ಚದರ ಮೀಟರ್‌ನಿಂದ 50,000 ಚದರ ಮೀಟರ್‌ವರೆಗೆ ವಿಸ್ತಾರವಾಗಲಿದೆ. ರನ್‌ವೇ ವಿಸ್ತೀರ್ಣವನ್ನು 3,750 ಮೀಟರ್‌ಗೆ ವಿಸ್ತರಿಸುತ್ತಿದ್ದೇವೆ, ಇದು ಅಂತರರಾಷ್ಟ್ರೀಯ ವಿಮಾನಗಳಿಗೆ ಉತ್ತಮ ಸೌಲಭ್ಯವನ್ನು ಒದಗಿಸಲಿದೆ ಎಂದು ಸಿಂಧಿಯಾ ತಿಳಿಸಿದರು.

ಅಯೋಧ್ಯೆ ವಿಮಾನ ನಿಲ್ದಾಣದ ಮೊದಲ ಹಂತವನ್ನು ₹1,450 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡವು 6,500 ಚದರ ಮೀಟರ್‌ ವಿಸ್ತೀರ್ಣವನ್ನು ಹೊಂದಿದ್ದು, ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸಲಿದೆ ಎಂದು ಅವರು ಹೇಳಿದರು.

‘ನಾಳೆ ಜರುಗಲಿರುವ ವಿಮಾನ ನಿಲ್ದಾಣದ ಉದ್ಘಾಟನೆಯು ನಾಗರಿಕ ವಿಮಾನಯಾನ ಕ್ಷೇತ್ರ, ಅಯೋಧ್ಯೆ, ಉತ್ತರ ಪ್ರದೇಶ ಹಾಗೂ ಭಾರತಕ್ಕೆ ಮಾತ್ರವಲ್ಲದೆ, ಹಿಂದೂ ಧರ್ಮದ ಶಕ್ತಿ ಹಾಗೂ ಬದ್ಧತೆಯನ್ನು ನಂಬುವ ಎಲ್ಲರಿಗೂ ಐತಿಹಾಸಿಕ ದಿನವಾಗಲಿದೆ’ ಎಂದು ಸಿಂಧಿಯಾ ತಿಳಿಸಿದರು.

ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ‘ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ’ ಎಂದು ಹೆಸರಿಡಲಾಗುವುದು. ಈ ಕುರಿತು ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡದ ಮುಂಭಾಗವು ಮುಂಬರುವ ಶ್ರೀ ರಾಮ ಮಂದಿರ ದೇವಾಲಯದ ವಾಸ್ತುಶಿಲ್ಪವನ್ನು ಬಿಂಬಿಸುತ್ತದೆ. ಟರ್ಮಿನಲ್‌ ಕಟ್ಟಡದ ಒಳಭಾಗವನ್ನು ಭಗವಾನ್‌ ಶ್ರೀ ರಾಮನ ಜೀವನವನ್ನು ಚಿತ್ರಿಸುವ ಸ್ಥಳೀಯ ಕಲೆ, ವರ್ಣಚಿತ್ರಗಳು ಮತ್ತು ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ. ಇದರೊಂದಿಗೆ ಕಟ್ಟಡವು ಇನ್ಸುಲೇಟೆಡ್‌ ರೂಫಿಂಗ್‌ ಸಿಸ್ಟಮ್‌, ಎಲ್‌ಇಡಿ ಲೈಟಿಂಗ್‌, ಕಾರಂಜಿಗಳು, ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ, ಸೌರ ವಿದ್ಯುತ್‌ ಸ್ಥಾವರ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT