ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Ayodhya | ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ: ನಗರಕ್ಕೆ ಅಲಂಕಾರ, ಬಿಗಿ ಭದ್ರತೆ

Published 29 ಡಿಸೆಂಬರ್ 2023, 11:51 IST
Last Updated 29 ಡಿಸೆಂಬರ್ 2023, 11:51 IST
ಅಕ್ಷರ ಗಾತ್ರ

ಅಯೋಧ್ಯೆ: ನಾಳೆ (ಡಿ.30) ಪ್ರಧಾನಿ ನರೇಂದ್ರ ಮೋದಿಯವರು ಆಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ನಗರದಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ. ಇಡೀ ನಗರವನ್ನು ಹೂವುಗಳು, ಭಿತ್ತಿ ಪತ್ರಗಳಿಂದ ಸಿಂಗರಿಸಲಾಗಿದೆ.

ಕಳೆದ ಎರಡು ದಿನಗಳಿಂದ ನಗರವನ್ನು ದಟ್ಟ ಮಂಜು ಆವರಿಸಿದ್ದು, ಅದಾಗ್ಯೂ ಸಿದ್ಧತೆಗಳು ಭರದಿಂದ ನಡೆದಿವೆ ಎಂದು ಆಯೋಧ್ಯೆಯ ವಿಭಾಗೀಯ ಆಯುಕ್ತ ಗೌರವ್ ದಯಾಳ್ ತಿಳಿಸಿದ್ದಾರೆ.

ನವೀಕರಣಗೊಂಡಿರುವ ರೈಲ್ವೆ ನಿಲ್ದಾಣ ಹಾಗೂ ಹೊಸ ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಆಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಸಾರ್ವಜನಿಕ ಸಮಾವೇಶದಲ್ಲಿ ಭಾಷಣ ಕೂಡ ಮಾಡಲಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿಯವರು ಬೆಳಿಗ್ಗೆ ಸುಮಾರು 10.45ಕ್ಕೆ ಆಯೋಧ್ಯೆ ತಲುಪುವ ನಿರೀಕ್ಷೆ ಇದೆ. ಏರ್‌ಪೋರ್ಟ್‌ನಿಂದ ನೇರವಾಗಿ ನವೀಕೃತ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಬಳಿಕ ನೂತನ ಏರ್‌ಪೋರ್ಟ್‌ ಅನ್ನು ಲೋಕಾಪಾರ್ಪಣೆ ಮಾಡಲಿದ್ದಾರೆ. ಇದಾದ ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ’ ಎಂದು ದಯಾಳ್ ಅವರು ತಿಳಿಸಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ ಒಂದೂವರೆ ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಯಲಿದೆ. ಆ ಬಳಿಕ ಅಯೋಧ್ಯೆಯಿಂದ ತೆರಳಲಿದ್ದಾರೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ ಅಭಿವೃದ್ಧಿಪಡಿಸಲಾದ ರಾಮಪಥ ಹಾಗೂ ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಿಗೆ ತೆರಳುವ ದಾರಿಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸುವ ಕಾರ್ಯ ಗುರುವಾರದಿಂದಲೇ ಆರಂಭವಾಗಿದೆ.

ಏರ್‌ಪೋರ್ಟ್ ಹಾಗೂ ರೈಲ್ವೆ ನಿಲ್ದಾಣ ನಡುವೆ ಪ್ರಧಾನಿ ಮೋದಿ, ರೋಡ್ ಷೋ ನಡೆಸುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಅವರ ಭಾವಚಿತ್ರಗಳಿರುವ ದೊಡ್ಡ ಪೋಸ್ಟರ್‌ಗಳು ನಗರದ ಹಲವು ಕಡೆಗಳಲ್ಲಿ ಅಳವಡಿಸಲಾಗಿದ್ದು, ‘ಪುಣ್ಯ ನಗರಿ ಅಯೋಧ್ಯೆಗೆ ಸ್ವಾಗತ’ ಎಂದು ಬರೆಯಲಾಗಿದೆ.

ರಾಮಜನ್ಮಭೂಮಿಗೆ ತೆರಳುವ ರಾಮಪಥದಲ್ಲಿ ಉತ್ತರ ಪ್ರದೇಶದ ನಗರಾಭಿವೃದ್ಧಿ ಇಲಾಖೆ ಹಾಗೂ ಅಯೋಧ್ಯೆ ಪಾಲಿಕೆ ವತಿಯಿಂದ ದೊಡ್ಡ ಪೋಸ್ಟರ್‌ ಅಳವಡಿಸಲಾಗಿದ್ದು, ‘ಪ್ರಭು ರಾಮನ ನಗರಕ್ಕೆ ನಿಮಗೆ ಸ್ವಾಗತ’ ಎಂದು ಬರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT