ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಜನನ ಪ್ರಮಾಣಪತ್ರ ಪ್ರಕರಣ: ಆಜಂಖಾನ್‌, ಪತ್ನಿ‌, ಪುತ್ರನಿಗೆ 7 ವರ್ಷ ಜೈಲು ‌

Published 18 ಅಕ್ಟೋಬರ್ 2023, 14:01 IST
Last Updated 18 ಅಕ್ಟೋಬರ್ 2023, 14:01 IST
ಅಕ್ಷರ ಗಾತ್ರ

ರಾಮ್‌ಪುರ(ಉತ್ತರ ಪ್ರದೇಶ): ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌, ಪತ್ನಿ ತಜೀಮ್ ಫಾತಿಮಾ ಹಾಗೂ ಪುತ್ರ ಅಬ್ದುಲ್ಲ ಆಜಂ ಅವರಿಗೆ ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶೋಭಿತ್ ಬನ್ಸಲ್, ಮೂವರು ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ವಿಧಿಸಿದರು.

‘ಪುತ್ರ ಅಬ್ದುಲ್ಲ ಆಜಂ ಎರಡು ನಕಲಿ ಜನನ ಪ್ರಮಾಣಪತ್ರ ಪಡೆಯಲು ಆಜಂ ಖಾನ್‌ ಹಾಗೂ ತಜೀಮ್ ಫಾತಿಮಾ ನೆರವಾಗಿದ್ದರು. ಒಂದು ಪ್ರಮಾಣಪತ್ರವನ್ನು ಲಖನೌದಿಂದ ಹಾಗೂ ಮತ್ತೊಂದು ಪ್ರಮಾಣಪತ್ರವನ್ನು ರಾಮ್‌ಪುರದಿಂದ ಪಡೆಯಲಾಗಿದೆ’ ಎಂದು ಬಿಜೆಪಿ ಶಾಸಕ ಆ‌ಕಾಶ್‌ ಸಕ್ಸೇನಾ ದೂರು ನೀಡಿದ್ದರು. ಈ ದೂರಿನ ಅನ್ವಯ ಮೂವರ ವಿರುದ್ಧ 2019ರ ಜನವರಿ 3ರಂದು ರಾಮ್‌ಪುರದ ಗಂಜ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ರಾಮ್‌ಪುರ ಮುನ್ಸಿಪಾಲಿಟಿಯಲ್ಲಿ ನೀಡಿದ್ದ ಪ್ರಮಾಣಪತ್ರದಲ್ಲಿ ಅಬ್ದುಲ್ಲ ಅವರ ಜನ್ಮ ದಿನಾಂಕ 1993ರ ಜನವರಿ 1 ಎಂದು ನಮೂದಿಸಲಾಗಿದೆ. ಲಖನೌದಲ್ಲಿ ಪಡೆದಿದ್ದ ಪ್ರಮಾಣಪತ್ರದಲ್ಲಿ 1990ರ ಸೆಪ್ಟೆಂಬರ್ 30 ಎಂದು ನಮೂದಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಆಜಂ ಖಾನ್‌ ಪತ್ನಿ ತಜೀಮ್‌ ಫಾತಿಮಾ ಹಾಗೂ ಪುತ್ರ ಅಬ್ದುಲ್ಲ ಆಜಂ –ಪಿಟಿಐ ಚಿತ್ರ
ಆಜಂ ಖಾನ್‌ ಪತ್ನಿ ತಜೀಮ್‌ ಫಾತಿಮಾ ಹಾಗೂ ಪುತ್ರ ಅಬ್ದುಲ್ಲ ಆಜಂ –ಪಿಟಿಐ ಚಿತ್ರ

ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಸ್ವಾರ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅಬ್ದುಲ್ಲಗೆ, 2008ರಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಮೊರಾದಾಬಾದ್‌ ಕೋರ್ಟ್‌ ಫೆಬ್ರುವರಿಯಲ್ಲಿ ಆದೇಶಿಸಿತ್ತು. ಇದರ ಬೆನ್ನಲ್ಲೇ, ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ಮೊರಾದಾಬಾದ್‌ ಕೋರ್ಟ್‌ ಆದೇಶಕ್ಕೆ ತಡೆ ನೀಡುವಂತೆ ಕೋರಿ ಅಬ್ದುಲ್ಲ ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಹಾಬಾದ್‌ ಹೈಕೋರ್ಟ್‌ ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT