ಮುಂಬೈ: ‘ಸಾರ್ವಜನಿಕರು ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿ, ಆಕ್ರೋಶ ಹೊರಹಾಕದ ಹೊರತು ಆಡಳಿತ ಯಂತ್ರವು ಕಾರ್ಯಪ್ರವೃತ್ತವಾಗುವುದಿಲ್ಲ. ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ಲಘುವಾಗಿ ನೋಡಿದರೆ ಹೇಗೆ? ಶಾಲೆಗಳೇ ಮಕ್ಕಳಿಗೆ ಸುರಕ್ಷಿತ ಅಲ್ಲ ಎಂದ ಮೇಲೆ ಅವರು ಎಲ್ಲಿಗೆ ಹೋಗಬೇಕು? ಆ ಪುಟ್ಟ ಮಕ್ಕಳು ಏನು ಮಾಡಬೇಕು? ಇದೆಲ್ಲವೂ ಆಘಾತಕಾರಿಯಾಗಿದೆ...’
–ಹೀಗೆ ಹೇಳಿದ್ದು ಬಾಂಬೆ ಹೈಕೋರ್ಟ್. ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಬದ್ಲಾಪುರ ಪ್ರಕರಣ ಸಂಬಂಧ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಗುರುವಾರ ಪ್ರಕರಣ ದಾಖಲಿಸಿಕೊಂಡಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸರ ಕ್ರಮಗಳ ವಿರುದ್ಧ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಡೆರೆ ಹಾಗೂ ಪೃಥ್ವಿರಾಜ್ ಚೌಹಾಣ್ ವಿಚಾರಣೆ ನಡೆಸಿದರು.
ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲಿಲ್ಲ. ಶಾಲೆಯ ಆಡಳಿತ ಮಂಡಳಿಯು ಘಟನೆಯ ಕುರಿತು ಮೌನ ವಹಿಸಿತು. ತಮಗಾದ ದೌರ್ಜನ್ಯ ಕುರಿತು ಜನರು ಮಾತನಾಡದಂತೆ ಇಂಥ ನಡ ವಳಿಕೆಗಳು ಮಾಡುತ್ತವೆ. ಲೈಂಗಿಕ ದೌರ್ಜನ್ಯದಂಥ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಪೊಲೀಸರಿಗೆ ಸಂವೇದನೆ ಮೂಡಿಸಲು ಕ್ರಮ ಕೈಗೊಳ್ಳಬೇಕುಬಾಂಬೆ ಹೈಕೋರ್ಟ್
‘ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದಿದ್ದರೂ ಶಾಲೆಯ ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡಲಿಲ್ಲ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ನ್ಯಾಯಾಲಯ ಹೇಳಿತು. ಎಫ್‌ಐಆರ್ ದಾಖಲಿಸಿಕೊಳ್ಳದ ಪೊಲೀಸರ ಕುರಿತೂ ಕೋರ್ಟ್ ಆಕ್ರೋಶ ಹೊರಹಾಕಿತು.
‘ಈ ಪ್ರಕರಣವನ್ನು ಪೊಲೀಸರು ಸೂಕ್ತ ರೀತಿಯಲ್ಲಿ ನಿರ್ವಹಿಸಲಿಲ್ಲ. ಅವರ ಕಾರ್ಯವಿಧಾನದ ಕುರಿತು ನಮಗೆ ಬೇಸರ ಇದೆ. ಸಂತ್ರಸ್ತೆಯರಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ನಿಲುವು. ಪೊಲೀಸರಿಗೂ ಇದೇ ಆಸ್ಥೆ ಇರಬೇಕಿತ್ತು. ಇಲ್ಲಿ ಬಾಲಕಿಯರು ತಮಗಾದ ದೌರ್ಜನ್ಯದ ಕುರಿತು ಹೇಳಿಕೊಂಡಿದ್ದಾರೆ. ಇನ್ನೆಷ್ಟು ಬಾಲಕಿಯರು ಹೀಗೆ ಹೇಳಿಕೊಳ್ಳದೆಯೇ ಇಂಥ ಘಟನೆಗಳು ಮುಚ್ಚಿ ಹೋಗಿವೆಯೋ’ ಎಂದು ಹೇಳಿತು.
ಎಸ್‌ಐಟಿಗೆ ಸೂಚನೆ
ತನಿಖೆ ಪೂರ್ಣಗೊಳಿಸಿ ಆಗಸ್ಟ್ 27ರ ಒಳಗೆ ವರದಿ ಸಲ್ಲಿಸಿ
ಎಫ್‌ಐಆರ್ ದಾಖಲಿಸಿಕೊಳ್ಳಲು ಯಾಕಾಗಿ ವಿಳಂಬ ಮಾಡಲಾಯಿತು ಹಾಗೂ ಮತ್ತೊಬ್ಬ ಸಂತ್ರಸ್ತೆಯ ಹೇಳಿಕೆಯನ್ನು ಇದುವರೆಗೂ ಯಾಕೆ ದಾಖಲಿಸಿಕೊಂಡಿಲ್ಲ ಎಂಬ ಅಂಶಗಳು ವರದಿಯಲ್ಲಿರಬೇಕು
ಎಫ್‌ಐಆರ್ ಪ್ರತಿ, ಪೊಲೀಸರ ಕೇಸ್ ಡೈರಿ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡಿ
ನಮ್ಮ ಮಗ ಅಮಾಯಕ: ಪೋಷಕರ ಸಮರ್ಥನೆ
‘ನಮ್ಮ ಮಗ ಅಮಾಯಕ. ಸಣ್ಣವನಿರುವಾಗ ಆತನಿಗೆ ಮಾನಸಿಕ ಸಮಸ್ಯೆ ಇತ್ತು. ಆದರೆ, ಆತನಿಗೆ ಔಷಧ ಕೊಡಿಸಲಾಗಿದೆ. ನಮ್ಮ ಮಗನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ಆತನ ಮೇಲಿರುವ ಆರೋಪಗಳೆಲ್ಲವೂ ಸುಳ್ಳು’ ಎಂದು ಬದ್ಲಾಪುರ ಪ್ರಕರಣ ಆರೋಪಿಯ ಪೋಷಕರು ಮರಾಠಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
‘ಘಟನೆ ನಡೆದ ಹಿಂದಿನ 15 ದಿನಗಳಿಂದ ಆತ ಅಲ್ಲಿ ಕೆಲಸ ಮಾಡುತ್ತಿದ್ದ. ಅವನು ದಿನ ಬೆಳಿಗ್ಗೆ 11ಕ್ಕೆ ಶಾಲೆಗೆ ಶೌಚಾಲಯ ಸ್ವಚ್ಛತೆಗೆ ಹೋಗುತ್ತಾನೆ. ಆಮೇಲೆ ಬೇರೆ ಕಡೆ ಇದೇ ಕೆಲಸ ಮಾಡಲು ಹೋಗುತ್ತಾನೆ. ನಾವು ಕೂಡ ಇದೇ ಶಾಲೆಯಲ್ಲಿ ಸ್ವಚ್ಛತಾ ಕೆಲಸ ಮಾಡುತ್ತೇವೆ’ ಎಂದರು.
‘ಘಟನೆ ಬಗ್ಗೆ ನಮಗೆ ಆಗಸ್ಟ್ 13ಕ್ಕೆ ತಿಳಿಯಿತು. ನಂತರ 17ಕ್ಕೆ ಆತನನ್ನು ಪೊಲೀಸರು ಬಂಧಿಸಿದರು ಎಂಬುದನ್ನು ಅದೇ ಶಾಲೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ತಿಳಿಸಿದರು. ನಾವು ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿದೆವು. ಅಲ್ಲಿ ನಮ್ಮ ಮಗನಿಗೆ ಪೊಲೀಸರು ಹೊಡೆಯುತ್ತಿದ್ದರು. ನಮ್ಮ ಸಣ್ಣ ಮಗನಿಗೂ ಪೊಲೀಸರು ಹೊಡೆದರು’ ಎಂದರು.
‘ಕಾಣೆಯಾದ ಮಹಿಳೆಯರ ಪತ್ತೆ ಸರ್ಕಾರದ ಕರ್ತವ್ಯ’
‘ಮಾನವ ಕಳ್ಳಸಾಗಣೆಗೆ ಗುರಿಯಾಗಿ ಕಾಣೆಯಾಗುವ ಮಕ್ಕಳು ಹಾಗೂ ಮಹಿಳೆಯನ್ನು ಪತ್ತೆ ಮಾಡುವುದು ಸರ್ಕಾರದ ಕರ್ತವ್ಯ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
2019ರಿಂದ 2021ರವರೆಗೆ ಮಹಾರಾಷ್ಟ್ರದಲ್ಲಿ ಸುಮಾರು ಒಂದು ಲಕ್ಷ ಮಹಿಳೆಯರು ಕಾಣೆಯಾಗಿದ್ದಾರೆ. ಇವರನ್ನು ಪತ್ತೆಹಚ್ಚುವ ಸಂಬಂಧ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಪಿಐಎಲ್ ಸಲ್ಲಿಕೆಯಾಗಿದೆ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕಾಣೆಯಾದ ಮಕ್ಕಳು ಹಾಗೂ ಮಹಿಳೆಯರನ್ನು ಪತ್ತೆಹಚ್ಚಲು ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ವಿವರಿಸಿ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯ ಹೇಳಿತು. ಜೊತೆಗೆ ಮಾನವ ಕಳ್ಳಸಾಗಣೆಯನ್ನು ತಡೆಯಲು ರೈಲ್ವೆ ಪೊಲೀಸರು ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ನೀಡುವಂತೆ ಇಲಾಖೆಗೆ ಪೀಠ ಹೇಳಿದೆ. ಇಂಥ ಪ್ರಕರಣಗಳನ್ನು ತಡೆಗಟ್ಟಲು ಏನು ಮಾಡಬೇಕು ಎಂಬುದರ ಕುರಿತು ಸಲಹೆ ನೀಡುವಂತೆ ರಾಜ್ಯ ಮಹಿಳಾ ಆಯೋಗಕ್ಕೂ ನ್ಯಾಯಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.