ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯಲ್ಲಿ ‘ಬಕ್ರಾ ಮೇಳ’: ₹25 ಸಾವಿರದಿಂದ ₹10 ಲಕ್ಷ ಬೆಲೆಗೆ ಮಾರಾಟ ನಿರೀಕ್ಷೆ

Published 14 ಜೂನ್ 2024, 15:57 IST
Last Updated 15 ಜೂನ್ 2024, 2:49 IST
ಅಕ್ಷರ ಗಾತ್ರ

ನವದೆಹಲಿ: ಬಕ್ರೀದ್ ಹಬ್ಬಕ್ಕೆ ಎರಡು ದಿನ ಮಾತ್ರ ಬಾಕಿ ಉಳಿದಿದ್ದು, ರಾಷ್ಟ್ರ ರಾಜಧಾನಿಯ ಜಾಮಾ ಮಸೀದಿ ಸಮೀಪದ ಮೀನಾ ಬಜಾರ್ ಬಳಿ ‘ಬಕ್ರಾ ಮೇಳ’ ಆಯೋಜಿಸಿದ್ದು, ಸಾವಿರಾರು ರೂಪಾಯಿಯಿಂದ ಲಕ್ಷ ರೂಪಾಯಿವರೆಗಿನ ಮೇಕೆ ಮತ್ತು ಕುರಿಗಳು ಗಮನ ಸೆಳೆಯುತ್ತಿವೆ.

ಬಟ್ಟೆ ಅಂಗಡಿಗಳಿಂದ ತುಂಬಿರುವ ಈ ಪ್ರದೇಶವನ್ನು 10 ದಿನಗಳ ಬಕ್ರಾ ಮೇಳಕ್ಕಾಗಿ ತೆರವು ಮಾಡಲಾಗಿರುತ್ತದೆ. ಬಕ್ರೀದ್ ಹಬ್ಬದವರೆಗೆ ಈ ಮೇಳ ನಡೆಯುತ್ತದೆ. ಈ ಬಾರಿ ಜೂನ್ 16–17ರಂದು ಹಬ್ಬ ಆಚರಿಸಲಾಗುತ್ತಿದೆ.

25 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಬಹಳಷ್ಟು ಕುರಿ ಮತ್ತು ಮೇಕೆಗಳಿಂದ ಮೇಳ ಚಟುವಟಿಕೆಯಿಂದ ಕೂಡಿದೆ. ಅವುಗಳಲ್ಲಿ 'ಅಲ್ಲಾಹ್' ಮತ್ತು 'ಮುಹಮ್ಮದ್' ಉಲ್ಲೇಖವಿರುವ ಕುರಿ ₹10 ಲಕ್ಷವರೆಗೆ ಮಾರಾಟವಾಗಬಹುದು ಎಂದು ಸಿರೀಕ್ಷಿಸಲಾಗಿದೆ.

‘ಇವು ಅತ್ಯಂತ ವಿರಳವಾದ ಕುರಿಗಳಾಗಿದ್ದು, ಅವುಗಳ ಮೇಲೆ ಅಲ್ಲಾಹ್ ಎಂದು ಬರೆಯಲಾಗಿದೆ. ಮುಂಬೈನಲ್ಲಿ ಇಂಥದ್ದೇ ಕುರಿ ₹10 ಲಕ್ಷಕ್ಕೆ ಮಾರಾಟವಾಗಿದ್ದು, ನಾವಿನ್ನೂ ಬೆಲೆ ನಿಗದಿ ಮಾಡಿಲ್ಲ. ಯಾರು ಹೆಚ್ಚು ಬೆಲೆಗೆ ಬಿಡ್ ಮಾಡುತ್ತಾರೊ ಅವರಿಗೆ ಇದನ್ನು ಮಾರುತ್ತೇವೆ’ ಎಂದು ಕುರಿಯ ಮಾಲೀಕ ಮೊಹಮ್ಮದ್ ತಲೀಮ್ ಹೇಳಿದ್ದಾರೆ.

'ಕುರ್ಬಾನಿ' ಬಕ್ರೀದ್‌ನ ಪ್ರಮುಖ ಭಾಗವಾಗಿದೆ. ಮುಸ್ಲಿಮರು ಮಾಂಸವನ್ನು ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ನಿರ್ಗತಿಕರೊಂದಿಗೆ ಹಂಚಿಕೊಳ್ಳುತ್ತಾರೆ. ಇದು ಅಲ್ಲಾಹ್‌ಗೆ ಕೃತಜ್ಞತೆಯ ಸೂಚಕವಾಗಿದೆ.

ಪ್ರತಿ ವರ್ಷ ಬಕ್ರೀದ್‌ಗೆ ಮೇಕೆಗಳನ್ನು ಮಾರಲು ನಾವು ಇಲ್ಲಿಗೆ ಬರುತ್ತೇವೆ ಎಂದು ಉತ್ತರಾಖಂಡದ ಹಲದ್ವಾನಿಯ ನೂರ್ ಹುಸೇನ್ ಹೇಳುತ್ತಾರೆ.

‘ಕುರಿಗಳ ಗಾತ್ರ ಮತ್ತು ಅವುಗಳ ತಳಿ ಆಧರಿಸಿ ₹25 ಸಾವಿರದಿಂದ 2 ಲಕ್ಷವರೆಗೆ ಮಾರಾಟವಾಗುತ್ತವೆ’ಎಂದೂ ಅವರು ಹೇಳಿದ್ದಾರೆ.

ನಿತ್ಯ ತಲಾ 150 ರಿಂದ 200 ಮೇಕೆಗಳನ್ನು ತುಂಬಿಕೊಂಡು 6 ರಿಂದ 7 ಟ್ರಕ್‌ಗಳು ಬಕ್ರಾ ಮೇಳಕ್ಕೆ ಆಗಮಿಸುತ್ತವೆ.

₹25 ಸಾವಿರದಿಂದ ₹40 ಸಾವಿರದ ಕುರಿಗಳು ಹೆಚ್ಚಿದ್ದು, ಬೇಗ ಬಿಕರಿಯಾಗುತ್ತವೆ. ಲಕ್ಷ ಬೆಲೆಯ ಕುರಿಗಳ ಸಂಖ್ಯೆ ಕಡಿಮೆ ಇದ್ದು, ಅವುಗಳಿಗೂ ಗ್ರಾಹಕರು ಇದ್ದಾರೆ ಎಂದು ವ್ಯಾಪಾರಿ ಶಾರುಕ್ ಖಾನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT