ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿಯಲ್ಲಿ ಪೂಜೆಗೆ ಅವಕಾಶ.. ಕೋರ್ಟ್ ಆದೇಶದ ವಿರುದ್ಧ ವಾರಾಣಸಿ ಬಂದ್‌

Published 2 ಫೆಬ್ರುವರಿ 2024, 9:54 IST
Last Updated 2 ಫೆಬ್ರುವರಿ 2024, 9:54 IST
ಅಕ್ಷರ ಗಾತ್ರ

ವಾರಾಣಸಿ: ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆಗೆ ಅವಕಾಶ ನೀಡಿದ ಜಿಲ್ಲಾ ನ್ಯಾಯಾಲಯದ ಆದೇಶ ವಿರೋಧಿಸಿ ವಾರಾಣಸಿಯಲ್ಲಿ ಮುಸ್ಲಿಮರು ಶುಕ್ರವಾರ ಬಂದ್‌ ಆಚರಿಸಿದರು.‌‌

ವಾರಾಣಸಿಯ ಮುಸ್ಲಿಂ ಬಾಹುಳ್ಯ ಪ್ರದೇಶಗಳಾದ ದಾಲ್‌ಮಂಡಿ, ನಯೀ ಸಡಕ್, ನದೇಸರ್‌ ಹಾಗೂ ಅರ್ದಾಲಿ ಬಜಾರ್‌ನ ಮಾರುಕಟ್ಟೆಗಳು ಸೇರಿದಂತೆ ವಿವಿಧೆಡೆ ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಶುಕ್ರವಾರದ ನಮಾಜ್‌ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

ಮಸೀದಿಯ ನಿರ್ವಹಣೆ ನೋಡಿಕೊಳ್ಳುತ್ತಿರುವ ಅಂಜುಮಾನ್‌ ಇಂತೆ ಜಾಮಿಯಾ ಸಮಿತಿಯು ಈ ಬಂದ್‌ಗೆ ಕರೆ ನೀಡಿತ್ತು. ‘ಜಿಲ್ಲೆಯ ಮಾರುಕಟ್ಟೆಗಳನ್ನೆಲ್ಲ ಮುಚ್ಚಿ, ಶಾಂತಿಯುತವಾಗಿ ನಮಾಜ್‌ ಮಾಡಬೇಕು’ ಎಂದು ಸಮಿತಿಯು ಪತ್ರಮುಖೇನ ಮುಸ್ಲಿಮರನ್ನು ಕೇಳಿಕೊಂಡಿತ್ತು. ಅಲ್ಲದೇ, ‘ಮುಸ್ಲಿಂ ಮಹಿಳೆಯರು ಮನೆಯಲ್ಲಿಯೇ ಇರಬೇಕು’ ಎಂದೂ ಅದು ಸಲಹೆ ನೀಡಿತ್ತು.

ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ನೆರೆಯ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿತ್ತು. ಕಾಶಿ ವಿಶ್ವನಾಥ ಮಂದಿರದ ಬಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶ ಗಳಲ್ಲಿ ಕ್ಷಿಪ್ರ ಪೊಲೀಸ್‌ ಪಡೆಯನ್ನು ನಿಯೋಜನೆಗೊಳಿಸಲಾಗಿತ್ತು.

ಬಂದ್‌ ನಡುವೆಯೂ ನಮಾಜ್: ಬಂದ್‌ ನಡುವೆಯೂ ಗ್ಯಾನವಾಪಿ ಮಸೀದಿಯಲ್ಲಿ ಅಪಾರ ಸಂಖ್ಯೆಯ ಮುಸ್ಲಿಮರು ನಮಾಜ್‌ ಮಾಡಿದರು. ಬಿಗಿ ಭದ್ರತೆಯ ನಡುವೆ ಶುಕ್ರವಾರದ ನಮಾಜ್‌ ಶಾಂತಿಯುತವಾಗಿ ನಡೆಯಿತು.

‘ಪ್ರತಿ ಶುಕ್ರವಾರ ನಮಾಜ್‌ಗೆ ಬರುತ್ತಿದ್ದ ಜನರಿಗಿಂತಲೂ ದುಪ್ಪಟ್ಟು ಮಂದಿ ಈ ಶುಕ್ರವಾರ ಬಂದಿದ್ದರು’ ಎಂದು ಕೆಲವು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದರು. ‘ವಾರಾಣಸಿಯಾದ್ಯಂತ ನಿಯಮಿತವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೇಲೂ ತೀವ್ರ ನಿಗಾ ಇರಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಪೊಲೀಸ್‌ ಕಮಿಷನರ್‌ ಮುತಾ ಅಶೋಕ್‌ ಜೈನ್‌ ಹೇಳಿದರು.

‘ನ್ಯಾಯಾಲಯದ ಆದೇಶ ತರಾತುರಿಯದ್ದು’

ನವದೆಹಲಿ (ಪಿಟಿಐ): ‘ವಾರಾಣಸಿ ಜಿಲ್ಲಾ ನ್ಯಾಯಾಲಯ ತರಾತುರಿಯಿಂದ ಗ್ಯಾನವಾಪಿ ಮಸೀದಿಯ
ನೆಲಮಹಡಿಯಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಅವಕಾಶ ನೀಡಿದೆ. ಈ ವಿಷಯದಲ್ಲಿ ನ್ಯಾಯ ಪಡೆಯಲು ನಾವು ಸುಪ್ರೀಂ ಕೋರ್ಟ್‌ವರೆಗೂ ಹೋಗಲು ಸಿದ್ಧ’ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು
ಮಂಡಳಿ (ಎಐಎಂಪಿಎಲ್‌ಬಿ) ಶುಕ್ರವಾರ ಹೇಳಿದೆ.

ಅಂಜುಮಾನ್‌ ಇಂತೆಜಾಮಿಯಾ ಸಮಿತಿಯ ಮೇಲ್ಮನವಿಯ ವಿಚಾರಣೆಯನ್ನು ಅಲಹಾಬಾದ್‌ ಹೈಕೋರ್ಟ್‌ ಮುಂದೂಡಿದ ಬೆನ್ನಲ್ಲೇ ಎಐಎಂಪಿಎಲ್‌ಬಿ ಈ ಹೇಳಿಕೆ ನೀಡಿದೆ. 

ವಿಚಾರಣೆ ಮುಂದಕ್ಕೆ

ಪ್ರಯಾಗ್‌ರಾಜ್‌ (ಪಿಟಿಐ): ಗ್ಯಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕಲ್ಪಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಫೆಬ್ರುವರಿ 6ಕ್ಕೆ ಮುಂದೂಡಿ ಅಲಹಾಬಾದ್‌ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.

ನ್ಯಾಯಾಲಯದ ಆದೇಶಗಳಿಗೆ ವಿರೋಧ ಇದ್ದೇ ಇರುತ್ತದೆ. ಹಲವಾರು ಸಂದರ್ಭಗಳಲ್ಲಿ ನ್ಯಾಯಾಲಯಗಳು ಸರಿಯಾದ ತೀರ್ಪು ನೀಡಿರುವುದಿಲ್ಲ.
-ರಾಮ್‌ಗೋಪಾಲ್‌ ಯಾದವ್‌, ಸಮಾಜವಾದಿ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT