ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಮಸೀದಿ: ನೆಲಮಾಳಿಗೆಯಲ್ಲಿ ಪೂಜೆ ತಡೆಗೆ ಹೈಕೋರ್ಟ್ ಮೊರೆಹೋಗಲು SC ಸೂಚನೆ

Published 1 ಫೆಬ್ರುವರಿ 2024, 12:02 IST
Last Updated 1 ಫೆಬ್ರುವರಿ 2024, 12:02 IST
ಅಕ್ಷರ ಗಾತ್ರ

ನವದಹೆಲಿ: ಜ್ಞಾನವಾಪಿ ಸಂಕೀರ್ಣದ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ವಾರಾಣಸಿ ನ್ಯಾಯಾಲಯ ನೀಡಿದ ಆದೇಶವನ್ನು ಹಿಂಪಡೆಯಲು ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಜ್ಞಾನವಾಪಿ ಮಸೀದಿ ಸಮಿತಿಗೆ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಸಂಕೀರ್ಣದ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಅರ್ಚಕರ ಕುಟುಂಬದವರಿಗೆ ಅವಕಾಶ ನೀಡಿದ ವಾರಾಣಸಿ ನ್ಯಾಯಾಲಯದ ಆದೇಶ ಕುರಿತಂತೆ ತುರ್ತು ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಅನ್ನು ಅಂಜುಮನ್ ಇಂತೆಝಾಮಿಯಾ ಮಸೀದಿ ಸಮಿತಿಯ ಪರ ವಕೀಲರು ನ್ಯಾಯಾಲಯದ ರಿಜಿಸ್ಟ್ರಾರ್ ಮೂಲಕ ಕೋರಿದ್ದರು. ರಿಜಿಸ್ಟ್ರಾರ್ ಮೂಲಕ ಸಲ್ಲಿಕೆಯಾದ ಕೋರಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಅಲಹಾಬಾದ್ ಹೈಕೋರ್ಟ್‌ ಸಂಪರ್ಕಿಸುವಂತೆ ಸೂಚಿಸಿದ್ದಾರೆ.

‘ನ್ಯಾಯಾಲಯದ ಆದೇಶ ಕೈ ಸೇರುತ್ತಿದ್ದಂತೆ ಸ್ಥಳೀಯ ಆಡಳಿತವು ಅತಿ ಆತುರದಲ್ಲಿ ಮಸೀದಿಯ ದಕ್ಷಿಣ ಭಾಗದ ಕಬ್ಬಿಣದ ಸರಳುಗಳನ್ನು ಕತ್ತರಿಸಲು ಮುಂದಾಗಿದೆ. ಸ್ಥಳದಲ್ಲೀ ಭಾರೀ ಪೊಲೀಸ್‌ ಪಹರೆ ನಿಯೋಜಿಸಲಾಗಿದೆ. ಆದರೆ ಇಷ್ಟು ಆತುರದಲ್ಲಿ, ರಾತ್ರಿ ವೇಳೆಯೂ ಕೆಲಸ ಮಾಡುವ ಜರೂರು ಸ್ಥಳೀಯ ಆಡಳಿತಕ್ಕೆ ಅಗತ್ಯವಿರಲಿಲ್ಲ. ನ್ಯಾಯಾಲಯವು ಒಂದು ವಾರಗಳ ಕಾಲಾವಕಾಶವನ್ನು ತನ್ನ ಆದೇಶದಲ್ಲಿ ನೀಡಿದೆ. ಎದುರುದಾರರ ಪರವಾಗಿ ಸ್ಥಳೀಯ ಆಡಳಿತ ಕೈಜೋಡಿಸಿರುವ ಹಾಗೂ ಅದಕ್ಕೆ ಪೂರಕವಾಗಿ ಅವರಿಗೆ ನೆರವಾಗುವ ಉದ್ದೇಶದಿಂದ ಮತ್ತು ಮಸೀದಿ ವ್ಯವಸ್ಥಾಪನಾ ಮಂಡಳಿಗೆ ಯಾವುದೇ ಅವಕಾಶ ನೀಡದಂತ ಕ್ರಮಕ್ಕೆ ಮುಂದಾಗಿದೆ’ ಎಂದು ವಕೀಲರಾದ ನಿಜಾಮ್ ಪಾಶಾ ಹಾಗೂ ಫುಝೈಲ್ ಅಹ್ಮದ್‌ ಅಯೂಬ್‌ ತಮ್ಮ ಕೋರಿಕೆಯಲ್ಲಿ ಹೇಳಿದ್ದಾರೆ.

ಕಾನೂನು ಹೋರಾಟದಲ್ಲಿನ ಮಹತ್ವದ ಬೆಳವಣಿಗೆಯಲ್ಲಿ ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯ ನೆಲ ಮಾಳಿಗೆಯಲ್ಲಿ ಅರ್ಚಕರ ಮೊಮ್ಮಕ್ಕಳಿಗೆ ಪೂಜೆ ಸಲ್ಲಿಸಲು ನ್ಯಾಯಾಲಯ ಅವಕಾಶ ಕಲ್ಪಿಸಿತ್ತು.

1993ರ ಡಿಸೆಂಬರ್‌ಗೂ ಹಿಂದೆ ಪೂಜೆ ಸಲ್ಲಿಸುತ್ತಿದ್ದವರ ಮೊಮ್ಮಕ್ಕಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂಬ ಕಾಶಿ ವಿಶ್ವನಾಥ ದೇಗುಲ ಟ್ರಸ್ಟ್‌ ಹಾಗೂ ಅರ್ಜಿದಾರರ ಕೋರಿಕೆಯನ್ನು ನ್ಯಾಯಾಲಯ ಪುರಸ್ಕರಿಸಿತ್ತು. ಪೂಜೆ ಸಲ್ಲಿಸಲು ಅನುವು ಮಾಡಿಕೊಡುವುದರ ಜತೆಗೆ ವಾರದೊಳಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಂತೆಯೂ ನ್ಯಾಯಾಲಯ ಹೇಳಿತ್ತು.

ಭಾರತೀಯ ಪುರಾತತ್ವ ಇಲಾಖೆ (ASI)ಯು ಈ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸಿದ ನಂತರ ಸಲ್ಲಿಸಲಾದ ವರದಿ ಆಧರಿಸಿ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಆದೇಶ ಹೊರಡಿಸಿದ್ದರು. ASI ಸರ್ವೆಗೂ ಇದೇ ನ್ಯಾಯಾಲಯ ಆದೇಶಿಸಿತ್ತು. 

ಹಿಂದೂ ದೇಗುಲದ ಮೇಲೆ ಮೊಘಲ್ ದೊರೆ ಔರಂಗಜೇಬನು ಮಸೀದಿ ನಿರ್ಮಿಸಿದ್ದ ಎಂದು ಹಿಂದೂಪರ ವಕೀಲರು ವಾದಿಸಿದ್ದರು. ಈ ಕುರಿತು ಜ. 17ರಂದು ಆದೇಶಿಸಿದ್ದ ನ್ಯಾಯಾಲಯ, ಸಂಕೀರ್ಣದ ನೆಲಮಾಳಿಗೆಯನ್ನು ಜಿಲ್ಲಾಡಳಿತ ತನ್ನ ಸುಪರ್ಧಿಗೆ ತೆಗೆದುಕೊಳ್ಳಬೇಕು ಎಂದು ಆದೇಶಿಸಿತ್ತು. ಆದರೆ ಪೂಜೆ ಸಲ್ಲಿಸುವ ಹಕ್ಕು ಕುರಿತು ಯಾವುದೇ ಆದೇಶ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT