ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಅರ್ಚಕರಿಗೆ ಕೋರ್ಟ್‌ ಅನುಮತಿ

Published 31 ಜನವರಿ 2024, 11:09 IST
Last Updated 31 ಜನವರಿ 2024, 11:09 IST
ಅಕ್ಷರ ಗಾತ್ರ

ಲಖನೌ: ಮಹತ್ವದ ಬೆಳವಣಿಗೆಯಲ್ಲಿ, ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಹಿಂದೂ ಅರ್ಚಕರಿಗೆ ವಾರಾಣಸಿಯ ಜಿಲ್ಲಾ ಕೋರ್ಟ್‌ ಬುಧವಾರ ಅವಕಾಶವನ್ನು ಕಲ್ಪಿಸಿದೆ.

ಈ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಮಂಗಳವಾರವಷ್ಟೇ ಪೂರ್ಣಗೊಳಿಸಿದ್ದ ಜಿಲ್ಲಾ ಕೋರ್ಟ್, ಈ ಕುರಿತ ಆದೇಶವನ್ನು ಕಾಯ್ದಿರಿಸಿದೆ. 

‘ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಅರ್ಚಕರಿಗೆ ಕೋರ್ಟ್‌ ಅವಕಾಶ ನೀಡಿದೆ. ಇದಕ್ಕಾಗಿ ವಾರದಲ್ಲಿ ಅಗತ್ಯ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೂ ಆದೇಶಿಸಿದೆ’ ಎಂದು ಅರ್ಜಿದಾರರ ಪರ ವಕೀಲರಾದ ವಿಷ್ಣು ಶಂಕರ್‌ ಜೈನ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಇದಕ್ಕೂ ಮೊದಲು ಮಸೀದಿಯ ನೆಲಮಹಡಿಯ ಭದ್ರತಾ ವ್ಯವಸ್ಥೆ ನಿರ್ವಹಣೆಯ ಹೊಣೆಯನ್ನು ವಾರಾಣಸಿ ಜಿಲ್ಲಾ ಆಡಳಿತದ ಸುಪರ್ದಿಗೆ ಕೋರ್ಟ್‌ ಒಪ್ಪಿಸಿತ್ತು. ಜಿಲ್ಲಾ ನ್ಯಾಯಾಧೀಶ ಅಜಯ್‌ ಕೃಷ್ಣ ವಿಶ್ವೇಶ್ ಅವರ ಆದೇಶವನ್ನು ಉಲ್ಲೇಖಿಸಿದ ವಕೀಲ ಜೈನ್ ಅವರು, ‘ಈಗ ಯಾರು ಬೇಕಾದರೂ ನೆಲಮಹಡಿಗೆ ತೆರಳಿ ಪೂಜೆ ಸಲ್ಲಿಸಬಹುದು’ ಎಂದು ಪ್ರತಿಪಾದಿಸಿದರು.

ಹಿಂದೂಗಳ ಹೃದಯ ಸಂತಸದಿಂದ ತುಂಬಿದೆ –ವಿಎಚ್‌ಪಿ

ನವದೆಹಲಿ (ಪಿಟಿಐ): ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಅರ್ಚಕರಿಗೆ ಅವಕಾಶ ಕಲ್ಪಿಸಿದ ಕೋರ್ಟ್‌ ಆದೇಶದಿಂದ, ಹಿಂದೂಗಳ ಹೃದಯ ಸಂತೋಷದಿಂದ ತುಂಬಿದೆ ಎಂದು ವಿಶ್ವಹಿಂದೂ ಪರಿಷತ್ (ವಿಎಚ್‌ಪಿ) ಪ್ರತಿಕ್ರಿಯಿಸಿದೆ.

ಸೋಮನಾಥ ವ್ಯಾಸ್‌ ಅವರ ಮೊಮ್ಮಗನಿಗೆ ಪೂಜಿಸುವ ಹಕ್ಕನ್ನು ವಾರಾಣಸಿ ಜಿಲ್ಲಾ ಕೋರ್ಟ್‌ ನೀಡಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್‌ ಹೀಗೆ ಪ್ರತಿಕ್ರಿಯಿಸಿದರು. 1993ರವರೆಗೂ ಅಲ್ಲಿ ವ್ಯಾಸ್‌ ಪೂಜೆ ಸಲ್ಲಿಸುತ್ತಿದ್ದರು.

ನಿಯಮಿತವಾಗಿ ಪೂಜೆ ಸಲ್ಲಿಸಲು ಅಲ್ಲಿ ಅರ್ಚಕರನ್ನು ನೇಮಿಸಬಹುದು ಎಂದು ಕೋರ್ಟ್ ಹೇಳಿದೆ. 31 ವರ್ಷಗಳ ನಂತರ ಇಂಥದೊಂದು ಬೆಳವಣಿಗೆ ಘಟಿಸಿದೆ ಎಂದು ವಿಎಚ್‌ಪಿ ನಾಯಕ ಅಲೋಕ್‌ ಕುಮಾರ್ ಹೇಳಿದರು.

ಸಾಕ್ಷ್ಯ ಮತ್ತು ವಾಸ್ತವಾಂಶ ಆಧರಿಸಿ ಹಿಂದೂಗಳ ಪರವಾಗಿಯೇ ತೀರ್ಮಾನ ಹೊರಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಷಯ ಕೋರ್ಟ್‌ನಲ್ಲಿದೆ:  ಬಿಜೆಪಿ ಈ ಬೆಳವಣಿಗೆ ಕುರಿತಂತೆ ಯಾವುದೇ ‍ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ಪ್ರಶ್ನಿಸಿದಾಗ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ, ‘ವಿಷಯ ಕೋರ್ಟ್‌ ಅಂಗಳದಲ್ಲಿದೆ. ಇಂಥ ವಿಷಯಗಳ ಬಗ್ಗೆ ಮಾತನಾಡಬಾರದು’ ಎಂದು ಹೇಳಿದರು. 

ಅಂಜುಮಾನ್‌ ಸಮಿತಿಗೆ ಹೈಕೋರ್ಟ್‌ ನೋಟಿಸ್‌

ಪ್ರಯಾಗ್‌ರಾಜ್‌ (ಪಿಟಿಐ): ಜ್ಞಾನವಾಪಿ ಮಸೀದಿಯ ‘ವಜುಖಾನಾ’ ಪ್ರದೇಶದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ನಿರ್ದೇಶನ ನೀಡಲು ನಿರಾಕರಿಸಿದ ವಾರಾಣಸಿ ಕೋರ್ಟ್‌ ನಿರ್ಧಾರ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿ ಅಲಹಾಬಾದ್‌ ಹೈಕೋರ್ಟ್ ಬುಧವಾರ ಅಂಜುಮಾನ್‌ ಇಂತೆಜಾಮಿಯಾ ಸಮಿತಿಗೆ ನೋಟಿಸ್‌ ನೀಡಿದೆ.

ಶೃಂಗಾರ ಗೌರಿ ಪೂಜಾ ಮೊಕದ್ದಮೆಯ ಅರ್ಜಿದಾರರಲ್ಲಿ ಒಬ್ಬರಾದ ರಾಖಿ ಸಿಂಗ್ ಅವರ ಪರಿಷ್ಕೃತ ಅರ್ಜಿಗೆ ಸಂಬಂಧಿಸಿ ನ್ಯಾಯಮೂರ್ತಿ ರೋಹಿತ್ ರಂಜನ್‌ ಅಗರವಾಲ್ ಈ ಕುರಿತು ಆದೇಶ ನೀಡಿದರು.

ಅರ್ಜಿದಾರ ಮಹಿಳೆಯು, ‘ಶಿವಲಿಂಗ’ ಪತ್ತೆಯಾಗಿದ್ದ ಸ್ಥಳ ಹೊರತುಪಡಿಸಿ ಮಸೀದಿಯ ವಜುಖಾನಾ ವಲಯದ ಸಮೀಕ್ಷೆ ನಡೆಸಬೇಕು ಎಂದು ಈ ಮೊದಲು ವಾರಾಣಸಿ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ಜಿಲ್ಲಾ ಕೋರ್ಟ್‌ ಇದನ್ನು ತಿರಸ್ಕರಿಸಿತ್ತು.

ಇದು ಹಿತಾನುಭವದ ಆದೇಶ. ಕಾಶಿ ಮತ್ತು ಮಥುರಾದಲ್ಲಿಯೂ ದೇವಸ್ಥಾನಗಳನ್ನು ‘ಮೂಲಸ್ಥಳದಲ್ಲಿಯೇ’ ನಿರ್ಮಾಣ ಮಾಡಬೇಕು. ಅಲ್ಲಿ ಪೂಜೆ ಸಲ್ಲಿಸುವ ಹಕ್ಕು ಹಿಂದೂಗಳಿಗೆ ಸಿಗಬೇಕು.
-ಉಮಾ ಭಾರತಿ, ಬಿಜೆಪಿಯ ಹಿರಿಯ ನಾಯಕಿ
ಈ ಆದೇಶ ಒಂದು ಮೈಲಿಗಲ್ಲು. ಸಂತೋಷ ಪಡಬೇಕಾದ, ಹಿಂದೂಗಳಿಗೆ ಭಾವನಾತ್ಮಕವಾಗಿ ಪ್ರಮುಖವಾದ ದಿನ. ಹಿಂದೂ ಧರ್ಮೀಯರಿಗೆ ವಾರಾಣಸಿಗಿಂತಲೂ ಉತ್ತಮವಾದ ಸ್ಥಳ ಇನ್ನೊಂದಿಲ್ಲ.
-ಮೋಹನ್‌ ಯಾದವ್, ಮಧ್ಯಪ್ರದೇಶದ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT