ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಮಸೀದಿ ಜಾಗವನ್ನು ಮುಸ್ಲಿಮರು ಹಿಂದೂಗಳಿಗೆ ಒಪ್ಪಿಸಿ: ಗಿರಿರಾಜ್ ಸಿಂಗ್

Published 26 ಜನವರಿ 2024, 13:50 IST
Last Updated 26 ಜನವರಿ 2024, 13:50 IST
ಅಕ್ಷರ ಗಾತ್ರ

ನವದೆಹಲಿ: ಮುಸ್ಲಿಮರು ಜ್ಞಾನವಾಪಿ ಮಸೀದಿ ಸ್ಥಳವನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಒತ್ತಾಯಿಸಿದ್ದಾರೆ.

ಸ್ಥಳದಲ್ಲಿದ್ದ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ) ವರದಿ ನೀಡಿದೆ ಎಂದು ಹಿಂದೂಗಳ ಪರ ವಕಾಲತ್ತು ವಹಿಸಿರುವ ವಕೀಲರು ಬಹಿರಂಗಪಡಿಸಿದ ಒಂದು ದಿನದ ಬಳಿಕ ಸಚಿವರ ಹೇಳಿಕೆ ಹೊರಬಿದ್ದಿದೆ.

‘ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಇದನ್ನು ಸನಾತನಿಗಳು ಸ್ವಾಗತಿಸಿದ್ದಾರೆ. ಅಯೋಧ್ಯೆ, ಕಾಶಿ ಮತ್ತು ಮಥುರಾ ಯಾವಾಗಲೂ ನಮ್ಮ ಬೇಡಿಕೆಯಾಗಿವೆ’ಎಂದೂ ಸಚಿವರು ಹೇಳಿದ್ದಾರೆ.

‘ಈಗ ಎಲ್ಲ ಸಾಕ್ಷ್ಯಗಳು ಹೊರಬಿದ್ದಿದ್ದು, ಕಾಶಿಯನ್ನು ಹಿಂದೂಗಳಿಗೆ ಹಸ್ತಾಂತರ ಮಾಡಿ ಎಂದು ನನ್ನ ಮುಸ್ಲಿಂ ಸಹೋದರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಆ ಮೂಲಕ ಕೋಮು ಸೌಹಾರ್ದತೆ ನೆಲೆಸಲಿದೆ. ಸ್ವಾತಂತ್ರ್ಯಾನಂತರ ನಾವು ಯಾವುದೇ ಮಸೀದಿ ಕೆಡವಿಲ್ಲ. ಆದರೆ, ಪಾಕಿಸ್ತಾನದಲ್ಲಿ ಒಂದೂ ದೇವಾಲಯ ಉಳಿದಿಲ್ಲ’ ಎಂದು ಅವರು ಹೇಳಿದರು.

‘ಸೌಹಾರ್ದತೆಗಾಗಿ ನಾನು ಇದನ್ನು ಹೇಳುತ್ತಿದ್ದೇನೆ. ಯಾವುದೇ ಪ್ರಚೋದನಕಾರಿ ಹೇಳಿಕೆ ಕೊಡಬೇಡಿ. ಇದು ಬದಲಾದ ಭಾರತ, ಸನಾತನ ಧರ್ಮದ ಯುವಕರು ಜಾಗೃತರಾಗಿದ್ದಾರೆ’ಎಂದು ಗಿರಿರಾಜ್ ಹೇಳಿದರು.

‘ಯಾರಾದರೂ ಬಾಬರ್ ಅಥವಾ ಔರಂಗಜೇಬ್ ಆಗಲು ಯತ್ನಿಸಿದರೆ, ನಮ್ಮ ಯುವಕರು ಮಹಾರಾಣಾ ಪ್ರತಾಪ್ ಆಗುತ್ತಾರೆ. ನೀವು ಶಾಂತಿ ಕಾಪಾಡಿಕೊಳ್ಳಬೇಕು’ ಎಂದಿದ್ದಾರೆ.

ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್‌ಐ ಸಮೀಕ್ಷೆ ವರದಿಯನ್ನು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರಿಗೆ ನೀಡಲಾಗುವುದು ಎಂದು ವಾರಾಣಸಿ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

839 ಪುಟಗಳ ಎಎಸ್‌ಐ ವರದಿಯ ಪ್ರತಿಗಳನ್ನು ನ್ಯಾಯಾಲಯವು ಸಂಬಂಧಪಟ್ಟ ಕಕ್ಷಿದಾರರಿಗೆ ನೀಡಿದೆ ಎಂದು ಕಾಶಿ ವಿಶ್ವನಾಥ್-ಜ್ಞಾನವಾಪಿ ಪ್ರಕರಣದ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ವಾರಣಾಸಿಯಲ್ಲಿ ಗುರುವಾರ ಸಂಜೆ ಸುದ್ದಿಗಾರರಿಗೆ ತಿಳಿಸಿದ್ದರು.

17ನೇ ಶತಮಾನದಲ್ಲಿ ಔರಂಗಜೇಬ್‌ ಆಳ್ವಿಕೆಯಲ್ಲಿ ಭವ್ಯವಾದ ಕಾಶಿ ವಿಶ್ವನಾಥ ಮಂದಿರವನ್ನು ಕೆಡವಿದ ನಂತರ ಹಿಂದೂ ದೇವಾಲಯದ ಅವಶೇಷಗಳ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ವರದಿ ಸ್ಪಷ್ಟಪಡಿಸುತ್ತದೆ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT