ಬರೇಲಿ, ಉತ್ತರ ಪ್ರದೇಶ: ಇಲ್ಲಿನ ಶಾಹಿ– ಶೀಶ್‌ಗಢ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಒಂಬತ್ತು ಮಹಿಳೆಯರ ಕೊಲೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಎಲ್ಲ ಮೃತದೇಹಗಳು ಕತ್ತು ಹಿಸುಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕೊಲೆಗಳನ್ನು ಒಬ್ಬನೇ ವ್ಯಕ್ತಿ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸರಣಿ ಹಂತಕನ ಪತ್ತೆಗೆ ಹುಡುಕಾಟ ತೀವ್ರಗೊಳಿಸಿದ್ದಾರೆ.
ಬರೇಲಿಯ ಐಜಿಪಿ ರಾಕೇಶ್ ಸಿಂಗ್ ಅವರು ಸ್ವತಃ ತನಿಖೆಯ ನೇತೃತ್ವ ವಹಿಸಿಕೊಂಡಿದ್ದಾರೆ. ‘ಎಲ್ಲಾ ಒಂಬತ್ತು ಕೊಲೆಗಳಲ್ಲಿ ಸಾಮ್ಯತೆ ಇವೆ. ಸ್ಥಳೀಯ ಪೊಲೀಸರಿಗೆ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿಲ್ಲ. ಈ ನಿಷ್ಕ್ರಿಯತೆ ಮುಂದುವರಿಯಲು ಅವಕಾಶ ನೀಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ ಶಂಕಿತನ ರೇಖಾಚಿತ್ರ ಬಿಡಿಸಲಾಗಿದ್ದು, ಪೊಲೀಸರು ಅದನ್ನು ಮೂರು ದಿನಗಳ ಹಿಂದೆ ಬಿಡುಗಡೆಗೊಳಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿಸಿದರು.
ಹಾಜ್‌ಪುರ ಗ್ರಾಮದ ಅನಿತಾ ದೇವಿ ಎಂಬವರು ಸರಣಿ ಹಂತಕನ ಈಚೆಗಿನ ಬಲಿಪಶು ಆಗಿದ್ದಾರೆ. ಅವರ ಮೃತದೇಹ ಜುಲೈ 2ರಂದು ಪತ್ತೆಯಾಗಿತ್ತು. ಕತ್ತುಹಿಸುಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.
ಕಳೆದ ವರ್ಷ ಜುಲೈ 22 ರಂದು ಮೊದಲ ಕೊಲೆ ನಡೆದಿತ್ತು. ಖಜೂರಿಯಾ ಗ್ರಾಮದ ಕುಸುಮಾ ಅವರು ಕೊಲೆಯಾಗಿದ್ದರು. ಆ ಬಳಿಕ ವೀರಾವತಿ, ಮೆಹ್ಮೂದಾನ್, ದುಲಾರೂ ದೇವಿ, ಊರ್ಮಿಳಾ ದೇವಿ, ಕಲಾವತಿ, ಧನ್ವತಿ ಮತ್ತು ಪ್ರೇಮಾವತಿ ಎಂಬವರು ಕೊಲೆಯಾಗಿದ್ದಾರೆ.