ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಬೆಲೆ ತೆತ್ತಾದರೂ ಮಣಿಪುರದಿಂದಲೇ ಯಾತ್ರೆ ಆರಂಭಿಸುತ್ತೇವೆ: ಕಾಂಗ್ರೆಸ್‌

Published 10 ಜನವರಿ 2024, 10:43 IST
Last Updated 10 ಜನವರಿ 2024, 10:43 IST
ಅಕ್ಷರ ಗಾತ್ರ

ನವದೆಹಲಿ: ಮಣಿಪುರದ ಪ್ಯಾಲೇಸ್‌ ಗ್ರೌಂಡ್‌ನಿಂದ ‘ಭಾರತ್‌ ಜೋಡೋ ನ್ಯಾಯ ಯಾತ್ರೆ’ ಆರಂಭಿಸಲು ಕೋರಿದ್ದ ಅನುಮತಿಯನ್ನು ಮುಖ್ಯಮಂತ್ರಿ ಬಿರೇನ್‌ ಸಿಂಗ್ ಸರ್ಕಾರ ನಿರಾಕರಿಸಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

‘ಭಾರತ ಜೋಡೋ ಯಾತ್ರೆ’ಯ ಯಶಸ್ಸಿನ ಬಳಿಕ ಪೂರ್ವದಿಂದ ಪಶ್ಚಿಮದ ಕಡೆಗೆ ‘ಭಾರತ್‌ ಜೋಡೋ ನ್ಯಾಯ ಯಾತ್ರೆ’ ಆರಂಭಿಸಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಯಾತ್ರೆಯನ್ನು ಹಿಂಸಾಚಾರ ಪೀಡಿತ ಮಣಿಪುರದಿಂದಲೇ ಆರಂಭಿಸಬೇಕೆಂಬ ಇಂಗಿತವನ್ನು ಪಕ್ಷ ಹೊಂದಿದೆ.

ಅನುಮತಿ ನಿರಾಕರಣೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ, ‘ಯಾವುದೇ ಬೆಲೆ ತೆತ್ತಾದರೂ ‘ನ್ಯಾಯ ಯಾತ್ರೆ’ಯನ್ನು ಮಣಿಪುರದಿಂದಲೇ ಆರಂಭಿಸಲು ನಾವು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ಈ ಯಾತ್ರೆ ವಿಷಯವನ್ನು ರಾಜಕೀಯಗೊಳಿಸಲು ನಾವು ಇಷ್ಟಪಡುವುದಿಲ್ಲ. ಯಾತ್ರೆ ಆರಂಭಿಸಲು ಎಲ್ಲ ಸಿದ್ಧತೆ ನಡೆದಿದೆ. ಯಾತ್ರೆಯಿಂದ ಮಣಿಪುರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಯಾತ್ರೆಯನ್ನು ಶಾಂತಿಯುತವಾಗಿ ಮಾಡುತ್ತೇವೆ’ ಎಂದರು.

‘ಮಣಿಪುರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಏನೇ ಆದರೂ ಯಾತ್ರೆಯನ್ನು ಮಣಿಪುರದಿಂದಲೇ ಪ್ರಾರಂಭಿಸುತ್ತೇವೆ ಎಂಬ ಬಗ್ಗೆ ನಮಗೆ ಖಚಿತವಿದೆ’ ಎಂದು ತಿಳಿಸಿದರು.

‘ನ್ಯಾಯ ಯಾತ್ರೆ’ಯು ಮಣಿಪುರದ ಇಂಫಾಲದಿಂದ ಮುಂಬೈವರೆಗೆ 66 ದಿನಗಳವರೆಗೆ ನಡೆಯಲಿದೆ. ಯಾತ್ರೆಯು ಪೂರ್ವದಿಂದ ಪಶ್ಚಿಮದವರೆಗೆ 110 ಜಿಲ್ಲೆಗಳಲ್ಲಿ, 100 ಲೋಕಸಭಾ ಕ್ಷೇತ್ರಗಳಲ್ಲಿ 6,713 ಕಿ.ಮೀ ಕ್ರಮಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT