ನವದೆಹಲಿ: ಎಎಪಿ ಸಂಸದ ಸ್ವಾತಿ ಮಾಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಬಿಭವ್ ಕುಮಾರ್ (ದೆಹಲಿ ಸಿ.ಎಂ ಅರವಿಂದ ಕೇಜ್ರಿವಾಲ್ ಆಪ್ತ) ಬಂಧನ ಅಗತ್ಯವಾಗಿದ್ದು, ಪೊಲೀಸರು ಕಾನೂನಿನ ಪ್ರಕಾರ ನಡೆದುಕೊಂಡಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ತನ್ನ ಬಂಧನವನ್ನು ಕಾನೂನುಬಾಹಿರ ಎಂದು ಪ್ರತಿಪಾದಿಸಿ ಬಿಭವ್ ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿದ ಹೈಕೋರ್ಟ್, ಅವರ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿತ್ತು. ಆ ಕುರಿತು ಆದೇಶವನ್ನು ಶನಿವಾರ ಪ್ರಕಟಿಸಿದೆ.
ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಮಾಲಿವಾಲ್ ಅವರ ವಿರುದ್ಧ ಮೇ 13ರಂದು ಹಲ್ಲೆ ನಡೆಸಿದ್ದ ಆರೋಪವನ್ನು ಬಿಭವ್ ಕುಮಾರ್ ಎದುರಿಸುತ್ತಿದ್ದಾರೆ. ಅವರನ್ನು ಪೊಲೀಸರು ಮೇ 18ರಂದು ಬಂಧಿಸಿದ್ದರು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.