ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ | ಗ್ಯಾಂಗ್‌ಸ್ಟರ್‌ ಆನಂದ್‌ ಮೋಹನ್‌ ಸಿಂಗ್ ಬಿಡುಗಡೆ ಸಾಧ್ಯತೆ; ಭಾರಿ ವಿರೋಧ

Published 25 ಏಪ್ರಿಲ್ 2023, 8:05 IST
Last Updated 25 ಏಪ್ರಿಲ್ 2023, 8:05 IST
ಅಕ್ಷರ ಗಾತ್ರ

ಬಿಹಾರ: ದಲಿತ ಐಎಎಸ್‌ ಅಧಿಕಾರಿ ಜಿ. ಕೃಷ್ಣಯ್ಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಆನಂದ್ ಮೋಹನ್ ಸಿಂಗ್‌ನನ್ನು ಬಿಡುಗಡೆಗೊಳಿಸಲು ಬಿಹಾರ ಸರ್ಕಾರ ಮುಂದಾಗಿದ್ದು, ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

ಸೋಮವಾರ ಬಿಹಾರ ಸರ್ಕಾರ ಪ್ರಿಸನ್‌ ಮ್ಯಾನ್ಯುಯಲ್‌ಗೆ (PRISON MANUAL) ತಿದ್ದುಪಡಿ ತಂದಿದ್ದು, ಅದರ ಪ್ರಕಾರ 27 ಅಪರಾಧಿಗಳನ್ನು ಬಿಡುಗಡೆಗೊಳಿಸಲು ಸೂಚಿಸಿತ್ತು. ಈ 27 ಅಪರಾಧಿಗಳಲ್ಲಿ ಮಾಜಿ ಸಂಸದ ಆನಂದ್‌ ಮೋಹನ್ ಸಿಂಗ್‌ ಕೂಡ ಒಬ್ಬರಾಗಿದ್ದರು.

1994ರಲ್ಲಿ  ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಜಿ. ಕೃಷ್ಣಯ್ಯ ಅವರನ್ನು ಗುಂಪೊಂದು ಹತ್ಯೆ ಮಾಡಿತ್ತು. ಈ ಹತ್ಯೆಯ ಹಿಂದೆ ಆನಂದ್‌ ಮೋಹನ್‌ ಸಿಂಗ್‌ ಕೈವಾಡವಿದೆ ಎಂದು ತಿಳಿದುಬಂದಿದ್ದು, ಆತನನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಹಾರದ ಕೆಳ ನ್ಯಾಯಾಲಯವು ಆನಂದ್‌ ಸಿಂಗ್‌ಗೆ ಮರಣದಂಡನೆ ವಿಧಿಸಿತ್ತು. ‌ಪಾಟ್ನಾ ಹೈಕೋರ್ಟ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. 2012ರಲ್ಲಿ ಈ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.

ಕರ್ತವ್ಯದಲ್ಲಿದ್ದ ಸರ್ಕಾರಿ ಅಧಿಕಾರಿಯನ್ನು ಹತ್ಯೆಗೈದ ಅಪರಾಧಿಗಳಿಗೆ ಜೈಲು ಶಿಕ್ಷೆಯನ್ನು ಹಿಂತೆಗೆದುಕೊಳ್ಳುವುದನ್ನು ನಿಷೇಧಿಸುವ ಪ್ರಿಸನ್‌ ಮ್ಯಾನುಲ್‌ನ ಕಲಂಗೆ ಬಿಹಾರ ಸರ್ಕಾರ ತಿದ್ದುಪಡಿ ತಂದಿದೆ. ಈ ಹೊಸ ಕಾಯ್ದೆ(ತಿದ್ದುಪಡಿಯಾದ ನಂತರದ) 14 ವರ್ಷ ಅಥವಾ 20 ವರ್ಷಗಳ ಕಾಲ ಜೈಲು ಅನುಭವಿಸಿದ ಅಪರಾಧಿಗಳಿಗೆ ಅನ್ವಯಿಸುತ್ತದೆ ಎಂದು ರಾಜ್ಯ ಕಾನೂನು ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿತ್ತು.

ಜೈಲು ನಿಯಮಗಳಲ್ಲಿ ಬದಲಾವಣೆ ಮತ್ತು ಆನಂದ್‌ ಮೋಹನ್ ಸಿಂಗ್ ಬಿಡುಗಡೆಯನ್ನು ವಿರೋಧ ಪಕ್ಷಗಳು ಬಲವಾಗಿ ಖಂಡಿಸಿವೆ. ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಬಿಹಾರ ಸರ್ಕಾರದ ಈ ನಿರ್ಧಾರವನ್ನು ‘ದಲಿತ ವಿರೋಧಿ‘ ಎಂದು ಕರೆದಿದ್ದಾರೆ.

‘ಆಂಧ್ರಪ್ರದೇಶದ ಮೆಹಬೂಬ್‌ನಗರದ (ಈಗ ತೆಲಂಗಾಣದಲ್ಲಿರುವ) ಬಡ ದಲಿತ ಕುಟುಂಬಕ್ಕೆ ಸೇರಿದ ಅತ್ಯಂತ ಪ್ರಾಮಾಣಿಕ ಐಎಎಸ್ ಅಧಿಕಾರಿ ಜಿ ಕೃಷ್ಣಯ್ಯ ಅವರ ಬರ್ಬರ ಹತ್ಯೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರವ ಆನಂದ್‌ ಮೋಹನ್‌ ಸಿಂಗ್‌ ಬಿಡುಗಡೆ ನಿತೀಶ್ ಸರ್ಕಾರದ ದಲಿತ ವಿರೋಧಿ ನಡೆಯಾಗಿದೆ. ಈ ನಿರ್ಧಾರ ದಲಿತ ಸಮುದಾಯದ ಸಿಟ್ಟಿಗೆ ಕಾರಣವಾಗಬಹುದು‘ ಎಂದು ಮಾಯಾವತಿ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಅಪರಾಧಿಗೆ ಸಹಾಯ ಮಾಡುವ ಒಬ್ಬ ವ್ಯಕ್ತಿ ಭಾರತದ ಪ್ರಮುಖ ವ್ಯಕ್ತಿ ಎನಿಸಿಕೊಳ್ಳಲು ಸಾಧ್ಯವೇ‘ ಎಂದು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT