ಸುಲ್ತಾನ್‌ಪುರ(ಬಿಹಾರ): ವಿದ್ಯುತ್ ಸ್ಪರ್ಶದಿಂದ 9 ಕಾವಡ್ ಯಾತ್ರಿಕರು ದಾರುಣವಾಗಿ ಸಾವಿಗೀಡಾದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಸುಲ್ತಾನ್‌ಪುರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
‘ಭಾನುವಾರ ತಡರಾತ್ರಿ ಜಿಲ್ಲೆಯ ಇಂಡಸ್ಟ್ರಿಯಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್‌ಪುರ ಗ್ರಾಮದಲ್ಲಿ ಸಾಗುತ್ತಿದ್ದ ವೇಳೆ ಯಾತ್ರಿಕರಿದ್ದ ವಾಹನದ ಮೇಲೆ ಹೈ ಟೆನ್ಷನ್ ಓವರ್‌ಹೆಡ್ ತಂತಿಯೊಂದು ಬಿದ್ದಿದೆ. ಪರಿಣಾಮ 9 ಯಾತ್ರಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
‘ಜಲಾಭಿಷೇಕ ಮಾಡಲು ಸೋನೆಪುರದ ಬಾಬಾ ಹರಿಹರನಾಥ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ’ ಎಂದು ಹಾಜಿಪುರ-ಸದರ್‌ನ ಉಪವಿಭಾಗಾಧಿಕಾರಿ ರಾಮಬಾಬು ಬೈತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.