ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ| ಚುನಾವಣೆ ಹೊಸ್ತಿಲಲ್ಲಿ ಉಚ್ಚಾಟನೆ ಪರ್ವ: ಆರ್‌ಜೆಡಿ ತೆಕ್ಕೆಗೆ ಸಚಿವ

Last Updated 17 ಆಗಸ್ಟ್ 2020, 10:15 IST
ಅಕ್ಷರ ಗಾತ್ರ

ಪಟಣಾ: ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಇನ್ನು ಕೆಲವೇ ತಿಂಗಳು ಬಾಕಿ ಉಳಿದಿರುವಾಗಲೇ ಅಲ್ಲಿ ಉಚ್ಚಾಟನೆ ಪರ್ವ ಆರಂಭವಾಗಿದೆ. ಭಾನುವಾರ ಆರ್‌ಜೆಡಿ ಮೂವರು ಶಾಸಕರನ್ನು ಹೊರ ಹಾಕಿದ್ದರೆ, ಜೆಡಿಯು ಸಚಿವನನ್ನೇ ಹೊರದಬ್ಬಿದೆ.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು–ಬಿಜೆಪಿ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಯಾಗಿದ್ದ ಶ್ಯಾಮ್‌ ರಾಜಕ್‌ ಅವರನ್ನು ಜೆಡಿಯು ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಮಂತ್ರಿಸ್ಥಾನದಿಂದ ಕಿತ್ತೊಗೆದಿದ್ದು, ಪಕ್ಷದಿಂದಲೂ ಉಚ್ಚಾಟನೆ ಮಾಡಿದೆ. ಪಕ್ಷದಿಂದ ಅವರಿಗೆ ಆರು ವರ್ಷ ನಿಷೇಧವನ್ನೂ ಹೇರಲಾಗಿದೆ.

ಶ್ಯಾಮ್‌ ಅವರು ಪಕ್ಷದೊಂದಿಗೆ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಎಸ್‌. ಸಿದ್ಧಾರ್ಥ್‌ ಅವರೊಂದಿಗೆ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ಇಲಾಖೆ ನಡೆಸುವ ವಿಚಾರವಾಗಿ ಶ್ಯಾಮ್‌ ರಾಜಕ್‌ ಮತ್ತು ಸಿದ್ಧಾರ್ಥ್‌ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಸದ್ಯ ಅವರು ಆರ್‌ಜೆಡಿ ಸೇರಿದ್ದಾರೆ.

ರಾಜಕ್ ಪ್ರತಿನಿಧಿಸುವ ಫುಲ್ವಾರಿ ಷರೀಫ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಮುಖಂಡ ಅರುಣ್ ಮಾಂಝಿ ಅವರಿಗೆ ಜೆಡಿಯು ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿತ್ತು ಎಂಬುದೂ ರಾಜಕ್‌ ಅವರ ಅಸಮಾಧಾನಕ್ಕೆ ಮತ್ತೊಂದು ಕಾರಣ.

ಆರ್‌ಜೆಡಿ ಸೇರಿರುವ ಶ್ಯಾಮ್‌ ರಾಜಕ್‌ ಹಿಂದೆ ಅದೇ ಪಕ್ಷದಲ್ಲಿದ್ದವರು. 2009ರಲ್ಲಿ ಅವರು ಆರ್‌ಜೆಡಿ ತೊರೆದು ಜೆಡಿಯು ಸೇರಿದ್ದರು. ಶ್ಯಾಮ್‌ ರಾಜಕ್‌ ಅವರು ಬಿಹಾರದ ದಲಿತ ಸಮುದಾಯದ ಪ್ರಬಲ ನಾಯಕರೂ ಹೌದು.

ಆರ್‌ಜೆಡಿ ಸೇರುವುದುಕ್ಕೂ ಮೊದಲು ಮಾತನಾಡಿರುವ ಶ್ಯಾಮ್‌ ರಾಜಕ್‌, ‘ನಿತೀಶ್ ಕುಮಾರ್ ಸಂಪುಟದ ಶೇ. 99 ಮಂತ್ರಿಗಳು ಅತೃಪ್ತರಾಗಿದ್ದಾರೆ. ಸದ್ಯ ಅವರಲ್ಲಿ ಅನೇಕರಿಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಯಕ್ಕೆ ತಕ್ಕಂತೆ ವಿಷಯಗಳು ತೆರೆದುಕೊಳ್ಳುತ್ತವೆ. ಆದರೆ, ಯಾರು ಪಕ್ಷವನ್ನು ತೊರೆಯಲಿದ್ದಾರೆ ಎಂಬ ಬಗ್ಗೆ ನನಗೆ ಯಾವುದೇ ಕಲ್ಪನೆ ಇಲ್ಲ. ನಾನು ಆರ್‌ಜೆಡಿ ಸೇರುತ್ತಿದ್ದೇನೆ ಎಂದಷ್ಟೇ ಹೇಳಬಲ್ಲೆ,’ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷವು ತನ್ನ ಮೂವರು ಶಾಸಕರನ್ನು ಭಾನುವಾರ ಪಕ್ಷದಿಂದ ಹೊರ ಹಾಕಿತ್ತು. ಪ್ರೇಮಾ ಚೌಧರಿ, ಮಹೇಶ್ವರ ಯಾದವ್‌ ಮತ್ತು ಫರಾಜ್‌ ಫಾತ್ಮಿ ಅವರನ್ನು ಆರ್‌ಜೆಡಿಯಿಂದ ಉಚ್ಚಾಟಿಸಿರುವುದಾಗಿ ಭಾನುವಾರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಲೋಕ್‌ ಮೆಹ್ತಾ ಹೇಳಿದರು.

ಈ ಮೂವರು ವಿವಿಧ ಸಂದರ್ಭಗಳಲ್ಲಿ ನಿತೀಶ್‌ ಪರವಾದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಅಲೋಕ್‌ ಮೆಹ್ತಾ ಹೇಳಿದ್ದಾರೆ.

243 ಸದಸ್ಯಬಲದ ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ 80 ಶಾಸಕರನ್ನು ಹೊಂದಿದೆ.

ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT