ಚಂಡೀಗಢ: ಹರಿಯಾಣ ವಿಧಾನಸಭೆಯ ಮತದಾನದ ದಿನಾಂಕವನ್ನು ಅಕ್ಟೋಬರ್ 5ಕ್ಕೆ ಮುಂದೂಡಿ ಕೇಂದ್ರ ಚುನಾವಣಾ ಆಯೋಗವು ಕ್ರಮ ಕೈಗೊಂಡಿರುವುದಕ್ಕೆ ಬಿಷ್ಣೋಯಿ ಸಮುದಾಯ ಆಯೋಗಕ್ಕೆ ಧನ್ಯವಾದ ತಿಳಿಸಿದೆ.
ಆಡಳಿತಾರೂಢ ಬಿಜೆಪಿ ಕೂಡ ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿದೆ.
ಅಖಿಲ ಭಾರತೀಯ ಬಿಷ್ಣೋಯಿ ಮಹಾಸಭಾದ ಉಪಾಧ್ಯಕ್ಷ ಸೋಮ್ ಪ್ರಕಾಶ್ ಬಿಷ್ಣೋಯಿ ಮಾತನಾಡಿ, ಚುನಾವಣಾ ದಿನಾಂಕವನ್ನು ಮುಂದೂಡಿರುವ ಆಯೋಗಕ್ಕೆ ನಮ್ಮ ಸಮುದಾಯ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಹೇಳಿದ್ದಾರೆ.
ಸಮುದಾಯದ ಲಕ್ಷಾಂತರ ಜನರು ಬಿಷ್ಣೋಯಿ ಉತ್ಸವದಲ್ಲಿ ಭಾಗವಹಿಸುತ್ತಾರೆ. ಈ ಸಮಯದಲ್ಲಿ ಚುನಾವಣೆ ನಡೆದರೆ ಮತದಾನದಿಂದ ಅವರು ವಂಚಿತರಾಗುತ್ತಿದ್ದರು ಎಂದು ಹೇಳಿದ್ದಾರೆ.
ಈ ಹಿಂದೆ ಅ. 1ರಂದು ಮತದಾನ ನಿಗದಿಯಾಗಿತ್ತು. ಬಿಷ್ಣೋಯಿ ಸಮುದಾಯದವರ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಶನಿವಾರ ತಿಳಿಸಿತ್ತು.
ಮತದಾನ ದಿನಾಂಕ ಮುಂದೂಡಿಕೆಯಾಗಿರುವ ಕಾರಣ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆಯ ಮತ ಎಣಿಕೆಯನ್ನು ಅ.4ರ ಬದಲಾಗಿ, ಅ.8ಕ್ಕೆ ಮುಂದೂಡಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಗುರು ಜಂಭೇಶ್ವರ ಸ್ಮರಣಾರ್ಥ ಸುಮಾರು 400 ವರ್ಷಗಳಿಂದ ಬಿಷ್ಣೋಯಿ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಹಬ್ಬ ಅಥವಾ ಉತ್ಸವ ಇದಾಗಿದೆ.
ಗುರು ಜಂಭೇಶ್ವರ ಅವರ ಸ್ವಗ್ರಾಮವಾದ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ‘ಮುಕಾಮ್’ಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ. ಆ.2ರಂದು ಈ ಸಲ ಹಬ್ಬ ನಡೆಯಲಿದ್ದು, ಹರಿಯಾಣದ ವಿವಿಧೆಡೆಯಿಂದ ಅಲ್ಲಿಗೆ ತೆರಳಲು ಜನರು ಮುಂಚಿತವಾಗಿ ತೆರಳುತ್ತಾರೆ. ಇದರಿಂದ ಲಕ್ಷಾಂತರ ಮಂದಿ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ’ ಎಂದು ಬಿಷ್ಣೋಯಿ ಮಹಾಸಭಾ ಆಯೋಗಕ್ಕೆ ಮನವಿಯಲ್ಲಿ ತಿಳಿಸಿತ್ತು.