ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಿರೋಧಿ ಕೆಲಸ ಮಾಡಿದ ಆರೋಪ: ಇಬ್ಬರು ಶಾಸಕರನ್ನು ಉಚ್ಚಾಟಿಸಿದ ಬಿಜೆಡಿ

Published 21 ಸೆಪ್ಟೆಂಬರ್ 2023, 9:57 IST
Last Updated 21 ಸೆಪ್ಟೆಂಬರ್ 2023, 9:57 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ಆಡಳಿತರೂಢ ಬಿಜೆಡಿಯು ತನ್ನ ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿದೆ. ಒಡಿಯಾ ದಿನಪತ್ರಿಕೆ ‘ಸಂಬದ್‌’ನ ಸಂಪಾದಕರೂ ಆಗಿರುವ ಖಂದಪಡ ಕ್ಷೇತ್ರದ ಶಾಸಕ ಸೌಮ್ಯ ರಂಜನ್ ಪಟ್ನಾಯಕ್ ಮತ್ತು ರೆಮುನಾದ ಶಾಸಕ ಸುಧಾಂಶು ಶೇಖರ್‌ ಪರಿದ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಜನ ವಿರೋಧಿ ಕೆಲಸ ಮಾಡಿದ ಆರೋಪದ ಮೇಲೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಮಖ್ಯಮಂತ್ರಿ ನವೀನ್ ಪಟ್ನಾಯಕ್‌ ಹೇಳಿದ್ದಾರೆ.

ಸೌಮ್ಯ ರಂಜನ್‌ ಅವರನ್ನು ಸೆ. 12 ರಂದು ಪಕ್ಷದ ಉಪಾಧ್ಯಕ್ಷರ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಪತ್ರಿಕೆಯಲ್ಲಿ ತಮ್ಮದೇ ಪಕ್ಷವನ್ನು ಟೀಕೆ ಮಾಡಿ ಸಂಪಾದಕೀಯ ಬರೆದಿದ್ದರು. ತನ್ನ ಹುದ್ದೆಯನ್ನು ಮೀರಿ ಪ್ರಭಾವ ಬಳಸುತ್ತಿದ್ದಾರೆ ಎಂದು ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ವಿ.ಕೆ ಪಾಂಡಿಯನ್‌ ವಿರುದ್ಧ ಆರೋಪಿಸಿದ್ದರು.

ಒಡಿಶಾ ಪೊಲೀಸ್‌ನ ಆರ್ಥಿಕ ಅಪರಾಧ ದಳ ಸೌಮ್ಯ ವಿರುದ್ಧ ಮೋಸ ಹಾಗೂ ವಂಚನೆ ಸೇರಿ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ದೂರು ದಾಖಲಿಸಿದ ಬೆನ್ನಲ್ಲೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಸಂಬದ್ ಪತ್ರಿಕೆಯ 300ಕ್ಕೂ ಅಧಿಕ ಉದ್ಯೋಗಿಗಳ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಕೋಟ್ಯಂತರ ರೂಪಾಯಿ ಸಾಲ ಪಡೆಯಲಾಗಿದೆ. ಇದು ಗಂಭೀರವಾದ ಬ್ಯಾಂಕ್‌ ವಂಚನೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಹಿ ಮಾಡಿರುವ ಪಕ್ಷದ ಪ್ರಕಟಣೆಯಲ್ಲಿ ಹೇಳಲಾಗಿದೆ.

ರೈತರಿಗೆ ಸೇರಬೇಕಾದ ₹3 ಕೋಟಿಯ ಸಹಾಯಧನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಸುಧಾಂಶು ಶೇಖರ್‌ ವಿರುದ್ಧ ಕೇಳಿ ಬಂದಿದೆ. ಲೋಕಾಯುಕ್ತದ ಆದೇಶ ಪ್ರಕಾರ ಇದರ ತನಿಖೆ ನಡೆಯುತ್ತಿದೆ ಎಂದು ಬಿಜೆಡಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT