ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ-ಎಜೆಎಸ್‌ಯು ಪಕ್ಷಗಳಿಗೆ ರಾಜ್ಯದ ಜನರ ಬಗ್ಗೆ ಕಾಳಜಿಯಿಲ್ಲ: ಜಾರ್ಖಂಡ್ ಸಿಎಂ

Published 18 ಆಗಸ್ಟ್ 2023, 8:57 IST
Last Updated 18 ಆಗಸ್ಟ್ 2023, 8:57 IST
ಅಕ್ಷರ ಗಾತ್ರ

ಗಿರಿದಿಹ್‌: ಬಿಜೆಪಿ ಮತ್ತು ಎಜೆಎಸ್‌ಯು ಪಕ್ಷಗಳು ಅಧಿಕಾರದಾಹಿಯಾಗಿದ್ದು, ಅವರಿಗೆ ರಾಜ್ಯದ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಆರೋಪಿಸಿದ್ದಾರೆ.

ಗಿರಿದಿಹ್‌ ಜಿಲ್ಲೆಯ ಡುಮ್ರಿಯಲ್ಲಿ ಜೆಎಂಎಂ ಅಭ್ಯರ್ಥಿ ಬೇಬಿ ದೇವಿ ಪರ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸೊರೇನ್‌, ಬಿಜೆಪಿ ಮತ್ತು ಎಜೆಎಸ್‌ಯು ಪಕ್ಷಗಳಿಗೆ ‘ಭೀತಿ ಮತ್ತು ಬೆದರಿಕೆಯ’ ರಾಜಕೀಯ ಮಾತ್ರ ತಿಳಿದಿದೆ ಎಂದು ಆರೋಪಿಸಿದರು.

ಒಡೆದು ಆಳುವುದೊಂದೇ ಅವರ ಕೆಲಸ. ಜನರನ್ನು ಪರಸ್ಪರ ಹೊಡೆದಾಡಿಸುವ ಮೂಲಕ ತಮ್ಮ ರಾಜಕೀಯ ರೊಟ್ಟಿಯನ್ನು ಬೇಯಿಸಿಕೊಳ್ಳುತ್ತಾರೆ. ಅವರಿಗೆ ಜಾರ್ಖಂಡ್‌ನ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅವರು ಅಧಿಕಾರವನ್ನು ಮಾತ್ರ ಪ್ರೀತಿಸುತ್ತಾರೆ ಎಂದು ಸೊರೇನ್‌ ಟೀಕಿಸಿದ್ದಾರೆ.

ಬಿಜೆಪಿ–ಎಜೆಎಸ್‌ಯು ಜಾರ್ಖಂಡ್‌ನಲ್ಲಿ ಸುಮಾರು 20 ವರ್ಷಗಳ ಕಾಲ ಆಡಳಿತ ನಡೆಸಿದೆ. ರಾಜ್ಯದಲ್ಲಿ ಡಬಲ್‌ ಇಂಜಿನ್‌ ಸರ್ಕಾರವನ್ನೂ ನಡೆಸುತ್ತಿದ್ದರು. ಆದರೆ, ಅವರು ‘ಜಾರ್ಖಂಡ್‌ ಅನ್ನು ದೇಶದ ಅತ್ಯಂತ ಹಿಂದುಳಿದ ರಾಜ್ಯವನ್ನಾಗಿ ಮಾಡುವ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಆಗಸ್ಟ್‌ 14 ರಂದು ಸಮನ್ಸ್‌ ನೀಡಿತ್ತು. ರಾಂಚಿಯಲ್ಲಿರುವ ಫೆಡರಲ್‌ ಏಜೆನ್ಸಿಯ ಕಚೇರಿಗೆ ಹಾಜರಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆ ದಾಖಲಿಸುವಂತೆ ಸೂಚಿಸಿತ್ತು. ಆದರೆ, ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಸಿಎಂ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲಿಲ್ಲ.

ಸೆಪ್ಟೆಂಬರ್‌ 5 ರಂದು ಡುಮ್ರಿ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಆಡಳಿತಾರೂಢ ಜೆಎಂಎಂನ ಬೇಬಿ ದೇವಿ ಮತ್ತು ಎಜೆಎಸ್‌ಯು ಪಕ್ಷದ ಯಶೋದಾ ದೇವಿ ಅನುಕ್ರಮವಾಗಿ ಇಂಡಿಯಾ ಬ್ಲಾಕ್‌ ಮತ್ತು ಎನ್‌ಡಿಎ ಅಭ್ಯರ್ಥಿಗಳಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಜೆಎಂಎಂ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿದ ಸಿಎಂ, ‘ಜನಸೇವೆಯ ಮೂಲಕ ಅಮರರಾದ ದಿವಂಗತ ಜಗರ್ನಾಥ್‌ ಮಹ್ತೋ ಅವರ ಕನಸುಗಳು ನನಸಾಗಿಸಲು ಬೇಬಿ ದೇವಿ ಹಾಗೂ ಜಾರ್ಖಂಡ್‌ ಸರ್ಕಾರ ಕೆಲಸ ಮಾಡಲಿದೆ’ ಎಂದು ಹೇಳಿದರು.

ಡುಮ್ರಿ ವಿಧಾನಸಭಾ ಕ್ಷೇತ್ರಕ್ಕೆ ಸೆಪ್ಟೆಂಬರ್‌ 5 ರಂದು ಉಪಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್‌ 8 ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT